ಬಳ್ಳಾರಿ : ವೈದ್ಯರೆಂದು ಹೇಳಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಕೌಲ್ಬಜಾರ್ನ ಬೆಳಗಲ್ ಕ್ರಾಸ್ ಹತ್ತಿರ ನಾಗೇಂದ್ರ ಎನ್ನುವವರು ನಡೆಸುತ್ತಿದ್ದ ಮಹಾಸತಿ ಥೆರಫಿ ಸೆಂಟರ್, ಶೇಕರ್ ಬಿಸ್ವಾಸ್ ಎನ್ನುವವರು ಮಿಲ್ಲರ್ಪೇಟೆಯ ಮುಲ್ಲಂಗಿ ಸ್ರ್ಟೀಟ್ನಲ್ಲಿ ನಡೆಸುತ್ತಿದ್ದ ಪೈಲ್ಸ್ (ಮೂಲವ್ಯಾಧಿ) ಕ್ಲಿನಿಕ್ ಹಾಗೂ ಕೊರ್ಲಗುಂದಿ ಗ್ರಾಮದ ರವಿ ಎನ್ನುವವರ ಕ್ಲಿನಿಕ್ಗಳ ಮೇಲೆ ಗುರುವಾರ ದಾಳಿ ನಡೆಸಿ, ನಿಖರ ದಾಖಲೆ ಇಲ್ಲದಿರುವುದು ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007, 2009ರ ಅಡಿಯಲ್ಲಿ ನೋಂದಣಿ ಮಾಡಿಸದೇ ಇದುದ್ದರಿಂದ ಕ್ಲಿನಿಕ್ಗಳನ್ನು ಮೋಹರು ಲಗತ್ತಿಸಿ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ವೈದ್ಯರೆಂದು ತಪ್ಪು ಮಾಹಿತಿ ನೀಡಿ ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮಾಡುವ ಮೂಲಕ ಚಿಕಿತ್ಸೆ ನೀಡುವ ಹಾಗೂ ಹೈ ಡೋಸ್ ಇಂಜಕ್ಷನ್ಗಳನ್ನು ನೀಡುವ ಮೂಲಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಕ್ಕೆ ಕಾರಣರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಅಂಗೀಕೃತ ವೈದ್ಯ ಪದವಿ ಪಡೆದವರ ಹತ್ತಿರ ಮಾತ್ರ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.
ದಾಳಿ ನಡೆಸಿದ ಕ್ಲಿನಿಕ್ಗಳನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007, 2009ರ ಅಡಿಯಲ್ಲಿ ಸೀಜ್ ಮಾಡಲಾಗಿದ್ದು, ವೈದ್ಯ ಪದವಿ ಪಡೆದವರು ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು, ಕ್ಲಿನಿಕ್ಗಳು ಅಥವಾ ಇನ್ನಾವುದೇ ವೈದ್ಯಕೀಯ ಸೇವೆ ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಅನುಮತಿ ಪಡೆದುಕೊಂಡು ಕಾರ್ಯ ಆರಂಭ ಮಾಡಬೇಕು. ಒಂದು ವೇಳೆ ಅನುಮತಿ ಪಡೆಯದೆ ಆರಂಭಿಸಿದರೆ ತಕ್ಷಣ ಸ್ಥಗಿತಗೊಳಿಸಿ ಅನುಮತಿ ಪಡೆಯಬೇಕು. ಅದರಲ್ಲೂ ವೈದ್ಯರು ಅಲ್ಲದವರು ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಕಾನೂನು ರೀತಿಯಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವೈದ್ಯ ವೃತ್ತಿ ಮಾಡುವವರಿಗೆ ಬಾಡಿಗೆ ಕೊಡುವಾಗ ಅಂಗಡಿ ಮತ್ತು ಮನೆಗಳ ಮಾಲಿಕರು, ಅವರ ವೈದ್ಯಕೀಯ ಪದವಿಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಬಾಡಿಗೆ ನೀಡಬೇಕು. ಒಂದು ವೇಳೆ ಸೀಜ್ ಮಾಡಿದ ನಂತರ ಉಂಟಾಗುವ ಅನಾನುಕೂಲತೆಗಳಿಗೆ ತಾವೇ ಹೊಣೆಗಾರರು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಅಬ್ದುಲ್ಲಾ, ಕೆಪಿಎಂಇ ತಂಡದ ಅರುಣ್ ಕುಮಾರ್, ಗೋಪಾಲ್ ಕೆ.ಹೆಚ್ ಹಾಗೂ ಸಿಬ್ಬಂದಿಯವರು ಇದ್ದರು.