ರಷ್ಯಾದ ಬ್ರಿಯಾನ್ ಸ್ಕ್ ನ ಶಾಲೆಯೊಂದರಲ್ಲಿ 14 ವರ್ಷದ ಬಾಲಕಿಯೊಬ್ಬಳು ಗುಂಡು ಹಾರಿಸಿದ್ದು, ಸಹಪಾಠಿಯೊಬ್ಬ ಮೃತಪಟ್ಟು, ಇತರ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
“ಪ್ರಾಥಮಿಕ ತನಿಖಾ ಮಾಹಿತಿಯ ಪ್ರಕಾರ, 14 ವರ್ಷದ ಬಾಲಕಿ ಪಂಪ್-ಆಕ್ಷನ್ ಶಾಟ್ ಗನ್ ನ ಅನ್ನು ಶಾಲೆಗೆ ತಂದಿದ್ದಳು. ಅವಳು ತನ್ನ ಸಹಪಾಠಿಗಳ ಮೇಲೆ ಗುಂಡು ಹಾರಿಸಿದಳು” ಎಂದು ರಷ್ಯಾದ ತನಿಖಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯ ಉದ್ದೇಶ ಮತ್ತು ಸಂದರ್ಭಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಟಾಸ್ ಹೇಳಿಕೆಯಲ್ಲಿ ತಿಳಿಸಿದೆ. ವಿದ್ಯಾರ್ಥಿನಿ ತನ್ನ ತಂದೆಯ ಬಂದೂಕನ್ನು ಶಾಲೆಗೆ ತಂದಿದ್ದಾಳೆ ಎಂದು ಕಾರ್ಯಾಚರಣೆ ಸೇವೆಗಳು ವರದಿ ಮಾಡಿವೆ.