ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸರ್ಕಾರಿ ಕಾರು ಚಾಲಕರು ತಮಗೆ ಊಟ, ವಸತಿ ವ್ಯವಸ್ಥೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಾರು ಚಾಲಕರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬೆಳಗಾವಿಯ ಸಂಗಮೇಶ್ವರ ನಗರದ ತರಬೇತಿ ಸಂಕಿರಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಊಟ ಸರಿಯಿಲ್ಲ ಎಂದು ಚಾಲಕರು ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಊಟ ಸರಿಯಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ನಿಂದಿಸಿದ್ದಾರೆ. ಅರೆಬೆಂದ ಚಪಾತಿ ನೀಡುತ್ತಿದ್ದಾರೆ. ಕುಡಿಯಲು ನೀರಿಲ್ಲ. ರೂಮುಗಳಿಲ್ಲದೇ ಬಾಲ್ಕನಿಯಲ್ಲಿ ಮಲಗಬೇಕಾದ ಸ್ಥಿತಿ. ಶೌಚಾಯ ವ್ಯವಸ್ಥೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಊಟ, ವಸತಿ ವ್ಯವಸ್ಥೆ ಕಲ್ಪಿಸದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.