ಚಾಮರಾಜನಗರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರಾಮಾಪುರದ ನಿರ್ಜನ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದ್ದು, ಬೆಡ್ ಶೀಟ್ ಮುಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೊಲೆಯಾದ ಸ್ಥಳದ 6 ಕಿಮೀ ದೂರದಲ್ಲಿ ಅವರ ಶವ ಪತ್ತೆಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಹಾಗೂ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ 62 ವರ್ಷದ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸಿದ್ದರು. ಇದೀಗ ಕೊಲೆಯಾದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಮೂವರು ದುಷ್ಕರ್ಮಿಗಳು ಹನೂರು ಬಳಿ ಮಹದೇವಯ್ಯ ಅವರನ್ನು ಕೊಲೆ ಮಾಡಿ ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.