ಬೆಂಗಳೂರು: ಮಿಚಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚೆನ್ನೈ ನಗರದಲ್ಲಿ ಪ್ರವಾಹ ಭೀತಿಯುಂಟಾಗಿದೆ. ತಮಿಳುನಾಡಿನ ಬಹುತೇಕ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ರಸ್ತೆ, ಅಪಾರ್ಟ್ ಮೆಂಟ್ ಗಳು, ಕಟ್ಟಡಗಳು ಸಂಪೂರ್ಣ ಜಲಾವೃತಗೊಂಡಿವೆ.
ಭಾರಿ ಮಳೆ, ಹವಾಮಾನ ವೈಪರಿತ್ಯದಿಂದಾಗಿ ರೈಲು ಸಂಚಾರ ಹಾಗೂ ವಿಮಾನ ಸಂಚಾರಗಳ ಮೇಲೆಯೂ ಪರಿಣಾಮ ಬೀರಿದೆ. ತಮಿಳುನಾಡಿಗೆ ತೆರಳಬೇಕಿದ್ದ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.
ಚೆನ್ನೈ ನಲ್ಲಿ ಲ್ಯಾಂಡ್ ಆಗಬೇಕಿದ್ದ ಒಟ್ಟು 27 ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದ್ದು, ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಕೆಂಪೇಗೌಡ ಏರ್ ಪೋರ್ಟ್ ರನ್ ವೇನಲ್ಲಿ ಡೈವರ್ಟ್ ಆಗಿರುವ ವಿಮಾನಗಳು ನಿಂತಿದ್ದು, ಪ್ರಯಾಣಿಕರು ವಿಮಾನದಲ್ಲಿಯೇ ಕಾಲಕಳೆಯುವಂತಾಗಿದೆ. ಈ ಮಧ್ಯೆ ಪ್ರಯಾಣಿಕರಿಗೆ ವಿಮಾನ ಯಾನ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡಿವೆ ಎಂದು ತಿಳಿದುಬಂದಿದೆ.