ಗರ್ಭಾವಸ್ಥೆಯಲ್ಲಿ ವಾಂತಿ ಹಾಗೂ ವಾಕರಿಕೆಯಂತಹ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಸುಮಾರು 70 ರಿಂದ 80 ಪ್ರತಿಶತ ಗರ್ಭಿಣಿಯರು ಗರ್ಭಾವಸ್ಥೆಯ ಮೊದಲ 3 ತಿಂಗಳಲ್ಲಿ ವಾಂತಿ ಅಥವಾ ವಾಕರಿಕೆಯಿಂದ ಬಳಲುತ್ತಾರೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ಹಾರ್ಮೋನ್‌ಗಳಲ್ಲಿ ಕ್ಷಿಪ್ರ ಬದಲಾವಣೆಯಾಗುತ್ತದೆ. ಗರ್ಭಕೋಶದಲ್ಲಿ ಭ್ರೂಣದ ಬೆಳವಣಿಗೆಗೆ ಹಾರ್ಮೋನ್ ಇದೆ, ಇದನ್ನು Human Chorionic Gonadotrophin (HCG) ಎಂದು ಕರೆಯಲಾಗುತ್ತದೆ.
ಗರ್ಭಾವಸ್ಥೆಯಲ್ಲಿ ಈ HCG ಹಾರ್ಮೋನ್ ಮಟ್ಟವು ಇದ್ದಕ್ಕಿದ್ದಂತೆ ಬಹಳ ವೇಗವಾಗಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ಮಹಿಳೆಯ ಹೊಟ್ಟೆ ಮತ್ತು ಕರುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪರಿಣಾಮವೇ ವಾಕರಿಕೆ ಮತ್ತು ವಾಂತಿ. ವಾಂತಿಯಿಂದ ಉಪಶಮನ ಪಡೆಯಲು ಗರ್ಭಿಣಿಯರು ಕೆಲವು ಯಾವ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ನಿಂಬೆ ನೀರು
ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆಯಿಂದ ಪರಿಹಾರ ಪಡೆಯಲು ನಿಂಬೆ ನೀರು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಚಿಟಿಕೆ ಉಪ್ಪು ಹಾಕಿದರೆ ಸಾಕು. ಬೇಕಿದ್ದರೆ ಸ್ವಲ್ಪ ಜೇನುತುಪ್ಪವನ್ನೂ ಹಾಕಿಕೊಳ್ಳಬಹುದು.
ನಿಂಬೆ ನೀರು ಕುಡಿಯುವುದರಿಂದ ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳಿವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆ, ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ಮತ್ತು ಉಪ್ಪು ಹೊಟ್ಟೆಯನ್ನು ತಂಪಾಗಿಸುತ್ತದೆ, ಇದು ವಾಂತಿಯಿಂದ ತಕ್ಷಣಕ್ಕೆ ಪರಿಹಾರ ನೀಡುತ್ತದೆ.
ಜೀರಿಗೆ ನೀರು
ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಜೀರಿಗೆ ನೀರು ಅತ್ಯುತ್ತಮ ಮನೆಮದ್ದು. ಜೀರಿಗೆ, ಉಷ್ಣವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಉರಿಯೂತ ನಿವಾರಕವಾಗಿಯೂ ಇದು ಕೆಲಸ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ನೀರನ್ನು ದಿನಕ್ಕೆ 2-3 ಬಾರಿ ತಣ್ಣಗೆ ಅಥವಾ ಉಗುರುಬೆಚ್ಚಗೆ ಕುಡಿಯುವುದರಿಂದ ಹೊಟ್ಟೆ ಉರಿ, ಸೆಳೆತ ಮತ್ತು ವಾಂತಿ ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಸೋಂಪಿನ ಕಷಾಯ
ಸೋಂಪು ಪರಿಮಳಯುಕ್ತ ಮಸಾಲೆ ಪದಾರ್ಥ. ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆಗೆ ಸೋಂಪಿನಿಂದಲೂ ಪರಿಹಾರವಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಂದು ಲೋಟ ನೀರಿಗೆ ಒಂದು ಚಮಚ ಸೋಂಪಿನ ಕಾಳನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿಕೊಂಡು ಕುಡಿಯಬಹುದು. ಈ ರೀತಿ ಮಾಡಿದರೆ ಗರ್ಭಿಣಿಯರಿಗೆ ವಾಂತಿ ಮತ್ತು ವಾಕರಿಕೆ ಕಡಿಮೆಯಾಗುತ್ತದೆ.