ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರು ಬೆಳಗ್ಗೆಯಿಂದಲೇ ಜನತಾ ದರ್ಶನಕ್ಕೆ ಆಗಮಿಸುತ್ತಿದಾರೆ.
ಸೀಗೇಹಳ್ಳಿಗೇಟ್ ನಿವಾಸಿ ಸುನೀತಾ ಅವರು ಆರೋಗ್ಯ ಹದಗೆಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಅ.20 ರಂದು ಹೋಗಿದ್ದ ವೇಳೆ ಆಸ್ಪತ್ರೆ ಸಿಬ್ಬಂದಿ ತೋರಿದ ಅಮಾನವೀಯ ವರ್ತನೆಯನ್ನು ಅವರು ವಿವರಿಸಿದ್ದ ಹೀಗೆ: ರಾತ್ರಿಯಿಡೀ ಬೇಧಿ ಆಗಿದ್ದರಿಂದ ನನ್ನ ಬಟ್ಟೆ ಗಲೀಜಾಗಿತ್ತು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿಯಲ್ಲೇ ಆಸ್ಪತ್ರೆಯಿಂದ ತೆರಳುವಂತೆ ಬೆದರಿಸಿದರು ಹಾಗೂ ತೀರಾ ಆಯಾಸಗೊಂಡಿದ್ದ ನನಗೆ ಗ್ಲೂಕೋಸ್ ಕೂಡ ಹಾಕದೆ ನಿರ್ದಯಿಗಳಂತೆ ವರ್ತಿಸಿದರು ಎಂದು ಸುನೀತಾ ಜನತಾ ದರ್ಶನದಲ್ಲಿ ನೋವು ತೋಡಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲೇ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಕರೆದು ಸಂಬಂಧಪಟ್ಟವರಿಂದ ವಿವರಣೆ ಕೇಳುವಂತೆ ಸೂಚಿಸಿ, ವೃದ್ಧೆಗೆ ನ್ಯಾಯದ ಭರವಸೆ ನೀಡಿದರು.
ಬಳಿಕ ತಮ್ಮ ಎರಡನೇ ದೂರನ್ನು ಮುಂದಿಟ್ಟ ಸುನಿತಾ ಅವರು, ಮನೆಯ ಮಾಲೀಕರು ಲೀಸ್ ಹಣ ವಾಪಾಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕಣ್ಣೀರಾದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರು ಸುನೀತಾ ಅವರ ಮನೆ ಮಾಲೀಕರ ವಿವರ ಪಡೆದುಕೊಂಡು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.