ಬೆಂಗಳೂರು: ಬೆಂಗಳೂರಿನ ಲುಲು ಮಾಲ್ ನಲ್ಲಿ ಕಾಮುಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನಿಡಿರುವ ಪ್ರಕರಣ ಮಾಸುವ ಮುನ್ನವೇ ಮೆಟ್ರೋದಲ್ಲಿ ಇಂತದ್ದೇ ಘಟನೆ ನಡೆದಿತ್ತು. ಇದೀಗ ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ನೇ ಯುವತಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಾಜಿನಗರದಿಂದ ಕೆ.ಆರ್.ಪುರ ಹೋಗುವ ರೂಟ್ ನಂ.300 EA ಬಸ್ ನಲ್ಲಿ ತೆರಳುತ್ತಿದ್ದ ಯುವತಿಗೆ ಬಸ್ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಕುಳಿತಿದ್ದ ಬಸ್ ಸೀಟ್ ಬಳಿ ಹೋಗಿ ಆಕೆಯ ಮೈಕೈಮುಟ್ಟಿ ಕಿರುಕುಳ ನೀಡಿದ್ದಾನೆ. ಕಳೆದ ತಿಂಗಳು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಂಡಕ್ಟರ್ ನ ಅಸಭ್ಯ ವರ್ತನೆಯಿಂದ ನೊಂದ ಯುವತಿ ಬಿಎಂಟಿಸಿಗೆ ಮೇಲ್ ಮೂಲಕ ದೂರು ನೀಡಿದ್ದಾಳೆ. ಬಿಎಂಟಿಸಿ ಭದ್ರತಾ ಹಾಗೂ ಜಾಗೃತದಳ ಅಧಿಕಾರಿಗಳು ಕಂಡಕ್ಟರ್ ಕೆಂಪಣ್ಣನ ವಿಚಾರಣೆ ನಡೆಸಿ, ಮೊಬೈಲ್ ಪರಿಶೀಲಿಸಿದ್ದಾರೆ. ಈ ವೇಳೆ ಕಂಡಕ್ಟರ್ ಕಿರುಕುಳ ನೀಡಿದ್ದು ಸಾಬೀತಾಗಿದೆ. ಅಲ್ಲದೇ ಆತನ ಮೊಬೈಲ್ ನಲ್ಲಿ ಹಲವು ಮಹಿಳಾ ಪ್ರಯಾಣಿಕರ ರಹಸ್ಯ ಫೋಟೋ ಸೆರೆ ಹಿಡಿದಿರುವುದು ಇದೆ. ಗೌಪ್ಯವಾಗಿ ಮಹಿಳಾ ಪ್ರಯಾಣಿಕರ ವಿಡಿಯೋ ಸೆರೆ ಹಿಡಿದಿರುವುದು ಪತ್ತೆಯಾಗಿದೆ.
ಸದ್ಯ ಕಂಡಕ್ಟರ್ ಕೆಂಪಣ್ಣನನ್ನು ಬಿಎಂಟಿಸಿ ತನಿಖಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.