ಧಾರವಾಡ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ವಿದ್ಯುತ್ ಅವಘಡ ಮಾಸುವ ಮುನ್ನವೇ ರಾಜ್ಯದಲ್ಲಿ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿದೆ.
ಧಾರವಾಡದಲ್ಲಿ ಕ್ರಿಕೆಟ್ ಆಡಲು ಹೋದ ಬಾಲಕನೋರ್ವ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ. ಶ್ರೇಯಸ್ ಶಿನ್ನೂರ (16) ಎಂಬ ಬಾಲಕ ತನ್ನ ಗೆಳೆಯರ ಜೊತೆ ಮನೆಯ ಟೆರೇಸ್ ನಲ್ಲಿ ಕ್ರಿಕೆಟ್ ಆಡುವಾಗ ಬಾಲ್ ಕ್ಯಾಚ್ ಹಿಡಿಯಲು ಹೋಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಶ್ರೇಯಸ್ ಜೊತೆಗಿದ್ದ ಗೆಳೆಯನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ತಾಯಿ ಹಾಗೂ 9 ತಿಂಗಳ ಮಗು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಜೀವ ದಹನವಾಗಿದ್ದರು. ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.