ಬೆಂಗಳೂರು: ಮರಣ ಪ್ರಮಾಣ ಪತ್ರದಲ್ಲಿ ತಪ್ಪಾಗುವುದನ್ನು ತಪ್ಪಿಸಲು ಮರಣ ಪತ್ರ ವಿತರಣೆ ಮಾಡುವ ಮೊದಲು ಇ- ಕೆವೈಸಿ ಮಾದರಿ ಅನುಸರಿಸುವಂತೆ ಹೈಕೋರ್ಟ್ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬೆಂಗಳೂರಿನ ಸಾಯಿಲಕ್ಷ್ಮಿ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಜನನ ಮತ್ತು ಮರಣ ಪ್ರಮಾಣಕ್ಕೆ ತನ್ನದೇ ಆದ ಮಾನ್ಯತೆ ಇದ್ದು, ಅದನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ. ಇ- ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.
ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟ ಕೂಡಲೇ ಅವರ ವಿವರಗಳನ್ನು ಇ-ಕೆವೈಸಿಯಲ್ಲಿ ಭರ್ತಿ ಮಾಡಬೇಕು. ನಂತರ ಅದನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮರಣ ಪ್ರಮಾಣ ಪತ್ರ ವಿತರಿಸಬೇಕು. ಇದರಿಂದ ಮರಣ ಪ್ರಮಾಣ ಪತ್ರ ವಿತರಣೆಯಲ್ಲಿ ದೋಷ ಆಗುವುದು ತಪ್ಪುತ್ತದೆ ಎಂದು ರಾಜ್ಯ ಇ- ಆಡಳಿತ ಇಲಾಖೆ ಕಾರ್ಯದರ್ಶಿ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಅರ್ಜಿದಾರರ ಪತಿ ಎಸ್.ಪಿ. ಲಕ್ಷ್ಮಿಕಾಂತ್ 2022ರ ನವೆಂಬರ್ 22 ರಂದು ಮೃತಪಟ್ಟಿದ್ದು, ನವೆಂಬರ್ 30ರಂದು ಆಸ್ಪತ್ರೆಯಲ್ಲಿ ನೋಂದಣಿಯಾಗಿತ್ತು. ಬಿಬಿಎಂಪಿ 2020ರ ಡಿಸೆಂಬರ್ 9 ರಂದು ಮರಣ ಪ್ರಮಾಣ ಪತ್ರ ನೀಡಿದ್ದು, ಅದರಲ್ಲಿ ಮೃತನ ತಂದೆ-ತಾಯಿ, ಪತ್ನಿಯ ಹೆಸರನ್ನು ತಪ್ಪಾಗಿ ನಮೂದಿಸಲಾಗಿತ್ತು. ದೋಷ ಸರಿಪಡಿಸುವಂತೆ 2023ರ ಜನವರಿ 9ರಂದು ಸಾಯಿಲಕ್ಷ್ಮಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು.
ಆದರೆ, ಅವರ ಮನವಿಯನ್ನು ತಿರಸ್ಕರಿಸಿದ್ದ ಬಿಬಿಎಂಪಿ ಆಸ್ಪತ್ರೆ ನಮೂದಿಸಿದ ವಿವರ ಆಧರಿಸಿ ಪ್ರಮಾಣ ಪತ್ರ ವಿತರಿಸಲಾಗಿದೆ. ಅದರಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲಾಗದು. ತಿದ್ದುಪಡಿ ಮಾಡಬೇಕಾದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಹಿಂಬರಹ ನೀಡಿತ್ತು. ಹೀಗಾಗಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.