ಮೊರ್ಬಿ: ಬಾಕಿ ಉಳಿದಿರುವ ಸಂಬಳಕ್ಕೆ ಬೇಡಿಕೆಯಿಟ್ಟಿದ್ದಕ್ಕಾಗಿ ದಲಿತ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿ ಪಾದರಕ್ಷೆಗಳನ್ನು ಬಾಯಿಯಲ್ಲಿ ಹಿಡಿದುಕೊಳ್ಳುವಂತೆ ಒತ್ತಾಯಿಸಿದ ಉದ್ಯಮಿ ಮತ್ತು ಇತರ ಆರು ಮಂದಿಯ ವಿರುದ್ಧ ಗುಜರಾತ್ ನ ಮೊರ್ಬಿಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿಲೇಶ್ ದಲ್ಸಾನಿಯಾ ಎಂಬ 21 ವರ್ಷದ ದಲಿತ ಯುವಕನನ್ನು ಥಳಿಸಲಾಗಿದೆ. ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮಾಲೀಕಳಾದ ವಿಭೂತಿ ಪಟೇಲ್ ಕೃತ್ಯವೆಸಗಿದ್ದಾರೆ. ಅಕ್ಟೋಬರ್ ಆರಂಭದಲ್ಲಿ 12,000 ರೂ. ಮಾಸಿಕ ವೇತನ ನೀಡುವುದಾಗಿ ಹೇಳಿ ಸೇರಿಸಿಕೊಂಡಿದ್ದು, ಅಕ್ಟೋಬರ್ 18 ರಂದು ಅವರ ಒಪ್ಪಂದವನ್ನು ಹಠಾತ್ ರದ್ದುಗೊಳಿಸಲಾಗಿದೆ.
ದಲ್ಸಾನಿಯಾ ಅವರು ಕೆಲಸ ಮಾಡಿದ 16 ದಿನಗಳ ಸಂಬಳವನ್ನು ಕೇಳಿದಾಗ, ಪಟೇಲ್ ಸ್ಪಷ್ಟ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಬುಧವಾರ ಸಂಜೆ, ದಲ್ಸಾನಿಯಾ ತನ್ನ ಸಹೋದರ ಮತ್ತು ನೆರೆಹೊರೆಯವರೊಂದಿಗೆ ವಿಭೂತಿ ಪಟೇಲ್ ಅವರ ಕಚೇರಿಗೆ ಭೇಟಿ ನೀಡಿದಾಗ, ಉದ್ಯಮಿ ಸಹೋದರ ಓಂ ಪಟೇಲ್ ಮತ್ತು ಅವರ ಸಹಚರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಭೂತಿ ಪಟೇಲ್ ಕೂಡ ದಲ್ಸಾನಿಯಾಗೆ ಕಪಾಳಮೋಕ್ಷ ಮಾಡಿ ವಾಣಿಜ್ಯ ಸಂಕೀರ್ಣದ ಟೆರೇಸ್ ಗೆ ಕರೆದೊಯ್ದು ಅಲ್ಲಿ ಇತರ ಉದ್ಯೋಗಿಗಳಿಂದ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಎಫ್‌ಐಆರ್‌ನ ಪ್ರಕಾರ ಪರೀಕ್ಷಿತ್ ಪಟೇಲ್, ಓಂ ಪಟೇಲ್ ಮತ್ತು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಆರೋಪಿಗಳು ದಲ್ಸಾನಿಯಾ ಅವರನ್ನು ಬೆಲ್ಟ್ ಗಳಿಂದ ಹೊಡೆದಿದ್ದಾರೆ. ಗುದ್ದಿದ್ದಾರೆ.
ವಿಭೂತಿ ಪಟೇಲ್ ಅವರು ದಲ್ಸಾನಿಯಾ ಅವರ ಪಾದರಕ್ಷೆಗಳನ್ನು ಬಾಯಿಗೆ ಹಾಕುವಂತೆ ಒತ್ತಾಯಿಸಿದರು ಮತ್ತು ಅವರ ಸಂಬಳ ಕೇಳಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಬಲವಂತ ಮಾಡಿ ಮತ್ತೇನಾದರೂ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದಾಳೆ.
ಇದಲ್ಲದೆ, ಆರೋಪಿಗಳು ಘಟನೆಯನ್ನು ಚಿತ್ರೀಕರಿಸಿದರು, ಕಚೇರಿಗೆ ಸುಲಿಗೆ ಮಾಡಲು ಬಂದಿದ್ದಾಗಿ ದಲ್ಸಾನಿಯಾ ಅವರನ್ನು ವೀಡಿಯೊದಲ್ಲಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಹಲ್ಲೆಯ ನಂತರ ದಲಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮೋರ್ಬಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
“ಎಲ್ಲಾ ಆರೋಪಿಗಳು ಹಲ್ಲೆ, ಕ್ರಿಮಿನಲ್ ಬೆದರಿಕೆ, ಗಲಭೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಆರೋಪಗಳನ್ನು ಎದುರಿಸುತ್ತಾರೆ” ಎಂದು ಉಪ ಪೊಲೀಸ್ ಅಧೀಕ್ಷಕ (ಎಸ್‌ಸಿ/ಎಸ್‌ಟಿ ಸೆಲ್) ಪ್ರತಿಪಾಲ್‌ಸಿನ್ಹ್ ಝಾಲಾ ಹೇಳಿದ್ದಾರೆ.
ದೂರಿನ ನಂತರ ಪೊಲೀಸರು ಎಲ್ಲಾ ಆರೋಪಿಗಳ ನಿವಾಸಗಳಲ್ಲಿ ಶೋಧ ನಡೆಸಿದರು. ಆದರೆ ಯಾರೂ ಪತ್ತೆಯಾಗಲಿಲ್ಲ. ಅವರ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.