ರಾಮನಗರ: ದೊಡ್ಡಗಂಗವಾಡಿ ಗ್ರಾಮದಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ಕಾರು ಹೊತ್ತಿ ಉರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ ಸಿಕ್ಕಿದೆ.
ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ನ.23ರಂದು ಅಪಘಾತದಲ್ಲಿ ಕಾರೊಂದು ಹೊತ್ತಿ ಉರಿದಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮನಗರದ ಮಂಜುನಾಥ್ ನಗರದಿಂದ ದೊಡ್ದ ಹೊಂಬೇಗೌಡ ಗ್ರಾಮಕ್ಕೆ ರವಿಕುಮಾರ್ ಹಾಗೂ ಪ್ರಮಿಳಾ ದಂಪತಿ ಮನೆ ಶಿಫ್ಟ್ ಮಾಡುತ್ತಿದ್ದರು. ಮನೆ ಸಾಮಾನುಗಳನ್ನು ಟೆಂಪೋವೊಂದರಲ್ಲಿ ತುಂಬಿ ಮುಂದೆ ಕಳುಹಿಸಿದ್ದರು. ಹಿಂದೆ ಕಾರಿನಲ್ಲಿ ದಂಪತಿ ಆಗಮಿಸುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿ ಬಂದ ನಾಲ್ವರ ಗುಂಪು ಟೆಂಪೋ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಹಲ್ಲೆ ನಿಲ್ಲಿಸಲು ಮುಂದಾದ ರವಿಕುಮಾರ್ ಹಾಗೂ ಆತನ ಪತ್ನಿ ಪ್ರಮಿಳಾ ಮೇಲೆಯೂ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪ್ರಮಿಳಾ ಅವರ ಮಾಂಗಲ್ಯ ಸರವನ್ನು ದೋಚಿ, ರವಿಕುಮಾರ್ ಅವರಿಗೆ ರಾಡ್ ನಿಂದ ಹೊಡೆದು ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ಹೀಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದುಷ್ಕರ್ಮಿಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದುದು, ಸ್ಥಳೀಯರು ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ದುಷ್ಕರ್ಮಿಗಳಿಂದ ಗಂಭೀರವಾಗಿ ಗಾಯಗೊಂಡಿರುವ ರವಿಕುಮಾರ್, ಪ್ರಮಿಳಾ ಹಾಗೂ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ರಾಮನಗರ ಪೊಲೀಸರು ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ನಡೆಸಿದ್ದಾರೆ.