ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಕನಿಷ್ಟ ವೇತನದ ಜೊತೆಗೆ ರಜೆ ಸೌಲಭ್ಯ, ಸೇವಾ ಭದ್ರತೆ ಸೇರಿ ವಿವಿಧ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ.
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮಪಂಚಾಯತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.
2017ಕ್ಕೂ ಮೊದಲು ಗ್ರಾಮಪಂಚಾಯತಿಗಳಲ್ಲಿ ನೇಮಕಗೊಂಡ ನೀರಗಂಟಿ, ಸ್ವಚ್ಛತಗಾರರ ಹುದ್ದೆಗಳಿಗೆ ಎದುರಾಗಿದ್ದ ಕನಿಷ್ಠ ವಿದ್ಯಾರ್ಹತೆಯ ತೊಡಕುಗಳನ್ನು ನಿವಾರಿಸಿ ವೇತನ ಪಾವತಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
– ಕನಿಷ್ಠ ವೇತನ
– ರಜೆ ಸೌಲಭ್ಯ
– ವೈದ್ಯಕೀಯ ಸೌಲಭ್ಯ
– ಸೇವಾ ಭದ್ರತೆ
– ಅನುಕಂಪದ ಮೇಲೆ ಕುಟುಂಬಸ್ಥರನ್ನು ನೇಮಕ
– ಪಿಂಚಣಿ ಸೌಲಭ್ಯ
– ಸಕಾಲದಲ್ಲಿ ವೇತನ
ಸೇರಿದಂತೆ ವಿವಿಧ ಸೌಲಭ್ಯಗಳು ಇನ್ಮುಂದೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ದೊರೆಯಲಿವೆ.
ಈ ರೀತಿ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ಸಬಲಗೊಳಿಸುವ ಹಾಗೂ ಹೆಚ್ಚು ಉತ್ತರದಾಯಿಯಾಗಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ಸರಾಗವಾಗಿ ಒದಗಿಸುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಹೆಜ್ಜೆಯನ್ನು ಇಡಲಾಗಿದೆ.