ನವದೆಹಲಿ: ನೀಟ್ ಬರೆಯುವ ವಿದ್ಯಾರ್ಥಿಗಳು ಮತ್ತು ಪದವಿಯಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಇನ್ನು ಮುಂದೆ ಜೀವಶಾಸ್ತ್ರ ಓದದಿದ್ದರೂ ಪ್ರವೇಶ ಅವಕಾಶ ಪಡೆಯಬಹುದಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಈ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮಾತ್ರ ಅಭ್ಯಾಸ ಮಾಡಿ ಜೀವಶಾಸ್ತ್ರ ಬಿಟ್ಟಿದ್ದರೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸೇರಿಕೊಳ್ಳಬಹುದು ಎಂದು ಹೇಳಲಾಗಿದೆ.
ಈ ಹಿಂದೆ ವೈದ್ಯಕೀಯ ಪದವಿ ಪರೀಕ್ಷೆಗೆ ಕೂರಲು ಜೀವಶಾಸ್ತ್ರ ಕಡ್ಡಾಯವಾಗಿತ್ತು. ಈಗ ನಿಯಮಗಳನ್ನು ಸಡಿಲಗೊಳಿಸಿದ್ದು, ಇನ್ನು ಮುಂದೆ ಪಿಯುಸಿಯಲ್ಲಿ ನೇರವಾಗಿ ಜೀವಶಾಸ್ತ್ರ ಕಲಿಯದಿದ್ದರೂ ವೈದ್ಯಕೀಯ ಪರೀಕ್ಷೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ನೇರ ಜೀವಶಾಸ್ತ್ರ ತರಗತಿಗಳಿಗೆ ಹೋಗಬೇಕಿತ್ತು. ಮುಕ್ತ ವಿವಿ, ಅಂಚೆ ಶಿಕ್ಷಣದಲ್ಲಿ ಕಲಿತಿದ್ದರೆ ಪ್ರವೇಶ ನೀಡುತ್ತಿರಲಿಲ್ಲ. ಈಗ ಅಂತಹ ಅಡೆತಡೆಗಳನ್ನು ನಿವಾರಣೆ ಮಾಡಲಾಗಿದೆ.
ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಮಾತ್ರ ಅಭ್ಯಾಸ ಮಾಡಿ ಜೀವಶಾಸ್ತ್ರ ಬಿಟ್ಟಿದ್ದರೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸೇರಿಕೊಳ್ಳಬಹುದು. ಆದರೆ, ಅಂತಹ ವಿದ್ಯಾರ್ಥಿಗಳು ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುವರಿಯಾಗಿ ಜೀವಶಾಸ್ತ್ರ ಕಲಿಯಬೇಕು. ಇಂತಹ ವಿದ್ಯಾರ್ಥಿಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ವೈದ್ಯಕೀಯ ತರಗತಿಗೆ ಸೇರಿಕೊಳ್ಳಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ) ಅರ್ಹತಾ ಪ್ರಮಾಣ ಪತ್ರ ನೀಡಲಿದೆ.
NMC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಸೂಚನೆಯು ಈ ನಿರ್ಧಾರವು “ಈ ಹಿಂದೆ ಅರ್ಜಿಗಳನ್ನು ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಸಹ ಅನ್ವಯಿಸುತ್ತದೆ” ಎಂದು ಹೇಳಿದೆ.
ಹಿಂದಿನ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(MCI) 1997 ರ ಪದವಿ ವೈದ್ಯಕೀಯ ಶಿಕ್ಷಣದ ನಿಯಮಗಳ ಮೂಲಕ ಅಧ್ಯಾಯ-II ಅಡಿಯಲ್ಲಿ ವಿವಿಧ ತಿದ್ದುಪಡಿಗಳನ್ನು ಒಳಗೊಂಡಂತೆ MBBS ಕೋರ್ಸ್‌ಗಳಿಗೆ ಪ್ರವೇಶ ಮತ್ತು ಆಯ್ಕೆಯನ್ನು ನಿಯಂತ್ರಿಸಿದೆ.