ಬೆಂಗಳೂರು: ಕ್ಯೂಆರ್ ಕೋಡ್ ಒಳಗೊಂಡ ಅತ್ಯಾಧುನಿಕ ಮಾದರಿಯ ಡಿಎಲ್, ಆರ್.ಸಿ. ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಪ್ರಸ್ತುತ ನೀಡುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಚಿಪ್ ಮಾತ್ರ ಇದೆ. ಇನ್ನು ಹೊಸದಾಗಿ ವಿತರಿಸುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಚಿಪ್ ಜೊತೆಗೆ ಕ್ಯೂಆರ್ ಕೋಡ್ ಇರಲಿದೆ. ಇದರಲ್ಲಿ ವಾಹನ ಮತ್ತು ಮಾಲೀಕರ ಸಂಪೂರ್ಣ ವಿವರ ಇರುತ್ತದೆ.
ಅತ್ಯಾಧುನಿಕ ಮಾದರಿಯ ಚಾಲನಾ ಪರವಾನಿಗೆ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಗಳನ್ನು ನೀಡಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. 2024ರ ಫೆಬ್ರವರಿ ನಂತರ ಚಿಪ್ ಮತ್ತು ಕ್ಯೂಆರ್ ಕೋಡ್ ಒಳಗೊಂಡ ಡಿಎಲ್, ಆರ್.ಸಿ. ನೀಡಲಾಗುತ್ತದೆ.
ಈಗಾಗಲೇ ಕಾರ್ಡ್ ಹೊಂದಿದವರಿಗೆ ನವೀಕರಣ ಸಮಯದಲ್ಲಿ ಹೊಸ ಕಾರ್ಡ್ ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಗದಿಪಡಿಸಿದ ವಿಶೇಷತೆಗಳನ್ನು ಈ ಕಾರ್ಡ್ ಗಳು ಒಳಗೊಂಡಿದ್ದು, ರಾಷ್ಟ್ರವ್ಯಾಪಿ ಡಿಎಲ್, ಆರ್.ಸಿ. ಒಂದೇ ರೀತಿ ಇರಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ನೀಡಿರುತ್ತಿರುವ ಕಾರ್ಡ್ ಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಹೊಸ ಕಾರ್ಡ್ ಗಳು ಹೊಂದಿರುತ್ತವೆ. ಕಾರ್ಡ್ ಹೊಂದಿದವರ ಹೆಸರು, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಫೋಟೋ, ವಿಳಾಸ, ವಾಹನದ ಪ್ರಕಾರ, ತುರ್ತು ಸಂಪರ್ಕ ಸಂಖ್ಯೆಯಂತಹ ಮಾಹಿತಿಯನ್ನು ಮುದ್ರಿಸಲಾಗುವುದು. ಆರ್.ಸಿ. ಕಾರ್ಡ್ ನಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತಾ ಅವಧಿ, ಚಾಸಿಸ್, ಎಂಜಿನ್ ನಂಬರ್, ಮಾಲೀಕರ ವಿವರ ಮತ್ತು ವಿಳಾಸ ಇರುತ್ತದೆ. ಕ್ಯೂಆರ್ ಕೋಡ್ ನಲ್ಲಿ ವಾಹನ ತಯಾರಕ ಕಂಪನಿ ಹೆಸರು, ಮಾಡೆಲ್, ವಾಹನದ ಶೈಲಿ, ಸೀಟ್ ಸಾಮರ್ಥ್ಯ ಮೊದಲಾದ ವಿವರ ಇರುತ್ತದೆ. ಇದರಿಂದ ವಾಹನ ಮಾಲೀಕರು ಮತ್ತು ವಿವರಗಳ ದೃಢೀಕರಣವನ್ನು ಸುಲಭವಾಗಿ ಪರಿಶೀಲಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.