ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಅನುಗ್ರಹ ಯೋಜನೆಯ ಪರಿಹಾರಧನವನ್ನು ಬಿಡುಗಡೆ ಮಾಡಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಕೃಷಿ ಮತ್ತು ಹೈನುಗಾರಿಕೆ ಒಂದನ್ನೊಂದು ಅವಲಂಬಿಸಿಕೊಂಡಿವೆ. ಬರದಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಸಹಜವಾಗಿಯೇ ಇದು ಹೈನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೈನುಗಾರ ಕುಟುಂಬಗಳನ್ನು ಈ ಸಂಕಷ್ಟದಿಂದ ಪಾರುಮಾಡುವ ಉದ್ದೇಶದಿಂದ ಕುರಿ, ಮೇಕೆ, ಹಸು ಮುಂತಾದ ಜಾನುವಾರುಗಳು ಆಕಸ್ಮಿಕ ಮರಣಕ್ಕೆ ತುತ್ತಾದರೆ ಅದರ ಮಾಲೀಕರಿಗೆ ಆರ್ಥಿಕ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಮರುಚಾಲನೆ ನೀಡಲಾಗಿದೆ, ಹಾಲಿಗೆ ನೀಡುವ ಪ್ರೋತ್ಸಾಹಧನದಿಂದ 24 ಲಕ್ಷ ಹೈನುಗಾರರಿಗೆ ಅನುಕೂಲವಾಗಿದೆ, ಸಾಕುಪ್ರಾಣಿಗಳನ್ನು ಬಾಧಿಸುವ ವಿವಿಧ ಮಾರಕ ರೋಗಗಳನ್ನು ತಡೆಗಟ್ಟಲು 2.6 ಕೋಟಿಗೂ ಅಧಿಕ ಲಸಿಕೆ ಹಾಕಲಾಗಿದೆ. ಹೀಗೆ ನಾಡಿನ ಹೈನುಗಾರರ ರಕ್ಷಣೆಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಎಂದು ಹೇಳಿದ್ದಾರೆ.