ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ ಕಲ್ಪಿಸಿದೆ.
ಬಾಹ್ಯಾಕಾಶ ರೋಬೋಟ್ ಗಳಿಗೆ ಕಲ್ಪನೆಗಳು ಮತ್ತು ವಿನ್ಯಾಸ ನೀಡಲು ಆಹ್ವಾನಿಸಲಾಗಿದ್ದು, ಉತ್ತಮ ಕಲ್ಪನೆ ಮತ್ತು ವಿನ್ಯಾಸ ನೀಡಿದ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಚಂದ್ರಯಾನ 3 ಯಶಸ್ವಿಯಾದ ನಂತರ ಇಸ್ರೋ ಚಂದ್ರ ಮತ್ತು ಇತರೆ ಆಕಾಶಕಾಯಗಳ ಕುರಿತ ಹೆಚ್ಚಿನ ಕಾರ್ಯಾಚರಣೆ ಅನ್ವೇಷಿಸಲು ಮುಂದಾಗಿದೆ. ‘ನಾವು ಬಾಹ್ಯಾಕಾಶ ರೋಬೋಟ್ ನಿರ್ಮಿಸೋಣ’ ಎನ್ನುವ ಅಡಿಬರಹದೊಂದಿಗೆ ಉಪಕ್ರಮ ಆರಂಭಿಸಿದ್ದು, ನವೆಂಬರ್ 20 ರಿಂದ ನೋಂದಣಿ ಶುರುವಾಗಲಿದೆ. ಡಿಸೆಂಬರ್ 15ರವರೆಗೆ ನೋಂದಣಿಗೆ ಅವಕಾಶವಿದ್ದು, ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ನೆರವಾಗುವ ಸಂವಹನ, ಸಹಯೋಗ. ವಿಚಾರಣೆ, ಸಮಸ್ಯೆ ಪರಿಹರಿಸುವ ಕೌಶಲ ಹೆಚ್ಚಿಸುವಲ್ಲಿ ಈ ಯೋಜನೆ ನೆರವಾಗುತ್ತದೆ.
ಮೊದಲ ಬಹುಮಾನ ವಿಜೇತರಿಗೆ 5 ಲಕ್ಷ ರೂ., ಎರಡನೇ ಬಹುಮಾನ ಪಡೆದವರಿಗೆ 3 ಲಕ್ಷ ರೂ. ಹಾಗೂ ತಲಾ ಒಂದು ಲಕ್ಷದ ಸಮಾಧಾನಕರ ಬಹುಮಾನ ನೀಡಲಾಗುವುದು. 2024ರ ಆಗಸ್ಟ್ ನಲ್ಲಿ ಬೆಂಗಳೂರಿನ ಯು.ಆರ್.ಎಸ್.ಸಿ. ಕ್ಯಾಂಪಸ್ ನಲ್ಲಿ ರೋಬೋಟಿಕ್ ಚಾಲೆಂಜ್ ಡೇ ಆಯೋಜಿಸಲಾಗುವುದು. ಭಾರತೀಯ ವಿದ್ಯಾರ್ಥಿಗಳು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅಂಶ ಒಳಗೊಂಡಿರುವ ಬಾಹ್ಯಾಕಾಶ ರೋಬೋಟ್ ವಿನ್ಯಾಸಗೊಳಿಸಲು ಆಹ್ವಾನಿಸಲಾಗಿದೆ.