ಬೆಂಗಳೂರು : ನಾಳೆಯೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆ ಬಹಳ ಕುತೂಹಲ ಮೂಡಿಸಿದೆ.
ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಈ ಸ್ಥಾನಕ್ಕೆ ಮೂವರ ಹೆಸರುಗಳು ಕೇಳಿಬರುತ್ತಿದ್ದು, ಶಾಸಕರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರ ಹೆಸರುಗಳು ವಿಪಕ್ಷ ನಾಯಕನ ಹುದ್ದಗೆ ಕೇಳಿಬರುತ್ತಿವೆ. ಈ ಮೂವರಲ್ಲಿ ಯಾರು ಪ್ರತಿಪಕ್ಷದ ನಾಯಕ ಆಗಲಿದ್ದಾರೆ ಎಂಬುದು ನಾಳೆ ಬಹಿರಂಗವಾಗುವ ಸಾಧ್ಯತೆಯಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು ನ.17 ರಂದು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು ವೀಕ್ಷಕರು ಬರಲಿದ್ದಾರೆ. ವೀಕ್ಷಕರಾಗಿ ಯಾರು ಬರುತ್ತಾರೆ ಎಂಬುದು ಗೊತ್ತಾಗುತ್ತದೆ. ಸಮಾವೇಶ ಬಗ್ಗೆ ಹಿರಿಯರ ಜೊತೆ ಚರ್ಚಿಸಿದ ನಂತರ ತೀರ್ಮಾನ ಮಾಡಲಾಗುವುದು. ಶಾಸಕರ ಸಮ್ಮುಖದಲ್ಲಿ ವಿಪಕ್ಷ ನಾಯಕರ ಘೋಷಣೆ ನಿರೀಕ್ಷೆಯಿದೆ ಎಂದು ಹೇಳಿದರು.ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ.