ಹಾಸನ: ಸಿಎಂ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ ಎಂದು ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಫೋನ್ ನಲ್ಲಿ ಮಹದೇವ್ ಎನ್ನುವವರೊಂದಿಗೆ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, ‘ನಾನು ಹೇಳಿದ ಲಿಸ್ಟ್ ನದ್ದು ಮಾತ್ರ ಮಾಡಿ’ ಎಂದು ಹೇಳಿದ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವರ್ಗಾವಣೆ ದಂಧೆ ಬಿಸಿನೆಸ್ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗುತ್ತಿದೆ. ಭ್ರಷ್ಟಾಚಾರ ಕಣ್ಮುಂದೆ ನಡೆಯುತ್ತಿದೆ ಸಿಎಂ ರಾಜೀನಾಮೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಶಾಸಕ ಹೆಚ್.ಡಿ.ರೇವಣ್ಣ ಯತೀಂದ್ರ ಸಿದ್ದರಾಮಯ್ಯ ಪರ ಮಾತನಾಡಿದ್ದು ಅಚ್ಚರಿಗೆ ಕಾರಣವಾಗಿದೆ.
ಯತೀಂದ್ರ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಚ್.ಡಿ,ರೇವಣ್ಣ, ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಶಾಸಕರಾಗಿದ್ದವರು ಕೆಲಸ ಮಾಡಬೇಕು ಅಂತಾ ಹೇಳಿರಬಹುದು. ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾರೆ. ಸಿಎಂ ಕ್ಷೇತ್ರದ ಜವಾಬ್ದಾರಿ ತಗೊಂಡಿದ್ದಾರೆ, ಹೇಳಿರಬಹುದು. ಇದೊಂದು ಸಾಮಾನ್ಯ ವಿಚಾರ ಎಂದು ಹೇಳಿದ್ದಾರೆ.