ಚಿತ್ರದುರ್ಗ : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಮಂಜೂರಾಗಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಅರ್ಜಿ ವಿಚಾರಣೆಯನ್ನು ಚಿತ್ರದುರ್ಗ ಕೋರ್ಟ್ ನಡೆಸಿದೆ.
ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಜೈಲಿನಿಂದ ಬಿಡುಗಡೆ ಮಾಡಲು ಚಿತ್ರದುರ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಈ ವೇಳೆ 2 ನೇ ಪೋಕ್ಸೋ ಪ್ರಕರಣದಲ್ಲಿ ಶರಣದ ವಿರುದ್ಧ ಹೊರಡಿಸಿದ ಬಾಡಿ ವಾರೆಂಟ್ ನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎಂಬ ಸರ್ಕಾರಿ ವಕೀಲರ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನ.16 ಕ್ಕೆ ಮುಂದೂಡಿತ್ತು.
ಇಂದು ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಂದ ಕಾನೂನು ಪ್ರಕ್ರಿಯೆ ನಡೆದಿದ್ದು, ಬಾಡಿ ವಾರೆಂಟ್ ಆದೇಶದ ಮೇಲೆ ಜೈಲಿನಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಇಂದು ಗುರುವಾರ ಮರುಘಾ ಶ್ರೀ ಬಿಡುಗಡೆಯಾಗಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀಗೆ ನ.8 ರಂದು ಹೈಕೋರ್ಟ್ ಒಂದು ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಶ್ರೀಗಳ ವಿರುದ್ಧ ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಬಿಡುಗಡೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀ ಪರ ವಕೀಲರು ಶ್ರೀಗಳ ಬಿಡುಗಡೆಗೆ ಕೋರಿ ಚಿತ್ರದುರ್ಗ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.