![](https://kannadadunia.com/wp-content/uploads/2023/05/r-ashoka-dh-file-1134800-1660115847-1137865-1661014241.jpg)
ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಆರ್.ಅಶೋಕ್, ಕಾಂಗ್ರೆಸ್ ನವರು ದಂಧೆ ಮಾಡುವುದರಲ್ಲಿ ಎಕ್ಸ್ ಪರ್ಟ್. ಸಿಎಂ ಅಧಿಕಾರವನ್ನು ಯತೀಂದ್ರ ಚಲಾಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿಎಂ ಪುತ್ರ ಯತೀಂದ್ರ ಅವರ ಬೆಳವಣಿಗೆ ಇಂದಿನದ್ದಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ಹಿಂದೆಯೂ ನಾವು ಹೇಳಿದ್ದೆವು. ಸರ್ಕಾರ ಬಂದಾಗಿನಿಂದ ವರ್ಗಾವಣೆ ದಂಧೆ, ಕಮಿಷನ್ ದಂಧೆ ನಡೆಯುತ್ತಲೇ ಇದೆ ಎಂದು ಕಿಡಿ ಕಾರಿದರು.
ವರ್ಗಾವಣೆ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರದ ಬಳಿ ಶಾಸಕರಿಗೆ ಅನುದಾನ ನಿಡಲು ಹಣವಿಲ್ಲ ಎನ್ನುತ್ತಿದ್ದಾರೆ. ಆದರೆ ಪ್ರತಿದಿನ ಈ ರೀತಿ ವಸೂಲಿಗೆ ಇಳಿದಿದ್ದಾರೆ. ಕಾಂಗ್ರೆಸ್ ನವರು ದಂಧೆ ಮಾಡುವುದಲ್ಲಿ ಎಕ್ಸ್ ಪರ್ಟ್ ಎಂದು ವಾಕ್ಪ್ರಹಾರ ನಡೆಸಿದ್ದಾರೆ.
ಮೊದಲು ಯತೀಂದ್ರ ಅವರ ವಿಡಿಯೋ ಬಗ್ಗೆ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.