ಬೆಂಗಳೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಕರೆ ಮಾಡಿ ನಾನು ಹೇಳಿದ ಲಿಸ್ಟ್ ನದ್ದು ಮಾತ್ರ ಮಾಡಿ ಎಂದು ಮಾತನಾಡಿದ್ದ ವಿಡಿಯೋ ವೈರಲ್ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಕಟ್, ಪೇಸ್ಟ್ ಮಾಡಲಾಗುತ್ತೆ ಹಾಗೇ ಮಾಡಿರಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಡಾ.ಯತೀಂದ್ರ ಓರ್ವ ಮಾಜಿ ಎಂಎಲ್ ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯನವರು ವರುಣಾದಲ್ಲಿ ಸ್ಪರ್ಧೆ ಮಾಡಿದ್ದರಿಂದ ಅವರು ನಿಲ್ಲಲು ಆಗಿಲ್ಲ. ಮೈಸೂರು ಜಿಲ್ಲೆ, ಪಕ್ಷದಲ್ಲಿ ಯತೀಂದ್ರ ಪ್ರಮುಖ ನಾಯಕ. ಮಾಜಿ ಶಾಸಕರು ಕೆಲಸ ಮಾಡುವುದು ತಪ್ಪು ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಯಾವ ವಿಚಾರದ ಬಗ್ಗೆ ಅವರು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಕಟ, ಪೇಸ್ಟ್ ಮಾಡಲಾಗುತ್ತದೆ. ಮಾತನಾಡಿದ ರೀತಿ ಬೇರೆ ಇರುತ್ತೆ. ತೋರಿಸುವುದೇ ಬೇರೆ ಇರುತ್ತೆ ಎಂದು ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.