ನವದೆಹಲಿ: ನವದೆಹಲಿ -ದರ್ಬಂಗಾ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಬೋಗಿಗಳು ಹೊತ್ತಿ ಉರಿದಿವೆ.
ಉತ್ತರ ಪ್ರದೇಶದ ಇಟಾವಾ ಬಳಿ ನವದೆಹಲಿ-ದರ್ಬಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ(02570) ಭಾರಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಇಟಾವಾದಿಂದ ಸರಾಯ್ ಭೂಪತ್ ಕಡೆಗೆ ಹೋಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
ವರದಿಗಳ ಪ್ರಕಾರ, ಎಕ್ಸ್ ಪ್ರೆಸ್ ರೈಲಿನ ಹಲವಾರು ಬೋಗಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಅಗ್ನಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ರೈಲು ಸರಾಯ್ ಭೂಪತ್ ನಿಲ್ದಾಣದ ಮೂಲಕ ಹಾದುಹೋಗುವಾಗ, ಸ್ಲೀಪರ್ ಕೋಚ್ನಲ್ಲಿ ಹೊಗೆಯನ್ನು ಸ್ಟೇಷನ್ ಮಾಸ್ಟರ್ ಗಮನಿಸಿದ್ದರು. ನಂತರ ಸ್ಟೇಷನ್ ಮಾಸ್ಟರ್ ಹೊಗೆಯ ಬಗ್ಗೆ ರೈಲು ಚಾಲಕ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದರು. ಬಳಿಕ ಸ್ಲೀಪರ್ ಕೋಚ್ನಿಂದ ಪ್ರಯಾಣಿಕರನ್ನು ಹೊರಕ್ಕೆ ತರಲಾಯಿತು.
ಬೆಂಕಿ ಹೊತ್ತಿಕೊಂಡ ತಕ್ಷಣ ಹಲವಾರು ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ಮೂಲಗಳ ಪ್ರಕಾರ ರೈಲಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು. ಉತ್ತರ ಪ್ರದೇಶದ ಸರಾಯ್ ಭೂಪತ್ ರೈಲು ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿದೆ. ಇದೀಗ ಬೆಂಕಿ ಹತೋಟಿಗೆ ಬಂದಿದೆ. ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.