ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಅವಧಿ ಮೀರಿದ ಸುಮಾರು 15 ಸಾವಿರದಷ್ಟು ವಾಹನಗಳಿದ್ದು, ಅವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತಲಾ ಐದು ಸಾವಿರದಂತೆ ಗುಜರಿಗೆ ಹಾಕಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಾರಿಗೆ ಇಲಾಖೆ ವತಿಯಿಂದ ವಿವಿಧ ಇಲಾಖೆಗಳಲ್ಲಿರುವ ಅವಧಿ ಮೀರಿದ ವಾಹನಗಳ ಪಟ್ಟಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಂತ ಹಂತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಸಾಗಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಅತ್ಯಂತ ಹಳೆಯ ವಾಹನಗಳನ್ನು ಪಟ್ಟಿ ಮಾಡಲಾಗುತ್ತಿದೆ. ಹಲವು ಇಲಾಖೆಗಳಲ್ಲಿ 20- 25 ವರ್ಷ ಮೀರಿದ ವಾಹನಗಳು ಇವೆ. 15 ವರ್ಷ ಮೇಲ್ಪಟ್ಟ ವಾಹನಗಳು ಕೂಡ ಇದ್ದು, ಆರಂಭಿಕ ಹಂತದಲ್ಲಿ ಹೆಚ್ಚು ಹಳೆಯ ಮತ್ತು ಹೆಚ್ಚು ಕಿಲೋ ಮೀಟರ್ ಓಡಿದ ವಾಹನಗಳನ್ನು ಗುಜರಿಗೆ ಹಾಕಲಾಗುವುದು.
ದೇವನಹಳ್ಳಿಯ ವಿಜಯಪುರ ಸಮೀಪ ಗುಜರಿ ಕೇಂದ್ರ ಆರಂಭಿಸಲಾಗಿದೆ. ತುಮಕೂರಿನ ಕೊರಟಗೆರೆ ಮತ್ತು ಕೊಪ್ಪಳ ಸೇರಿದಂತೆ ವಿವಿಧ ಕಡೆಗಳಲ್ಲಿಯೂ ಗುಜರಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.