ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಶಬ್ದಕ್ಕೆ ಬೆಚ್ಚಿಬಿದ್ದ ಚಿರತೆಯೊಂದು ಮನೆಯೊಂದಕ್ಕೆ ನುಗ್ಗಿದ ಘಟನೆ ನೀಲಗಿರಿ ಜಿಲ್ಲೆಯ ಕೂನೂರಿನ ಬ್ರೂಕ್ಲ್ಯಾಂಡ್ಸ್ ಪ್ರದೇಶದಲ್ಲಿ ನಡೆದಿದೆ.
ಚಿರತೆ ಮನೆಯೊಳಗೆ ಪ್ರವೇಶಿಸುವ ಮೊದಲು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸೇರಿದಂತೆ ಆರು ಜನರನ್ನು ಗಾಯಗೊಳಿಸಿತ್ತು. ನಂತರ ಅದು 15 ಗಂಟೆಗಳ ಕಾಲ ಮನೆಯೊಳಗೆ ಉಳಿದು ಭಾನುವಾರ ತಡರಾತ್ರಿ ತಪ್ಪಿಸಿಕೊಂಡಿದೆ.
ಚಿರತೆ ಮನೆಯಿಂದ ಹೊರಬಂದು ಕಾಡಿಗೆ ತಪ್ಪಿಸಿಕೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ, ದೀಪಾವಳಿ ದಿನದಂದು (ಭಾನುವಾರ) ಮುಂಜಾನೆ 3 ಗಂಟೆಗೆ ಜನರು ದೀಪಾವಳಿ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದಾಗ ಪಟಾಕಿಗಳನ್ನು ಶಬ್ಬಕ್ಕೆ ಬೆಚ್ಚಿದ ಒಂಟಿ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಸ್ಥಳೀಯರು ಪಟಾಕಿ ಸಿಡಿಸುವುದನ್ನು ನಿಲ್ಲಿಸಿದ ನಂತರ ಸಂಜೆ ತಡವಾಗಿ ಹೊರಟುಹೋಯಿತು ಎಂದು ಹೇಳಿದ್ದಾರೆ.