ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಅಭಿನಂದಿಸುತ್ತಲೇ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಬಿಜೆಪಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪುನಶ್ಚೇತನಗೊಳ್ಳಲಿ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿಯೇ ಯಡಿಯೂರಪ್ಪ ಎರಡು ಬಾರಿ ರಾಜೀನಾಮೆ ಸಲ್ಲಿಸಬೇಕಾಯ್ತು. ಬಿಜೆಪಿ ನಾಯಕರೇ ಒಮ್ಮೆ ಅವರನ್ನು ಕಣ್ಣೀರು ಹಾಕಿಸುತ್ತಾ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದರು. ಬಿಜೆಪಿ ವರಿಷ್ಠರು ಭ್ರಷ್ಟಾಚಾರದ ವಿರುದ್ಧ, ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಈಗ್ಯಾಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದರು.
ನಾನು ಮಲ್ಲಿಕಾರ್ಜುನ ಖರ್ಗೆ ಮಗನಾಗಿದ್ದರಿಂದ ರಾಜ್ಯ ರಾಜಕಾರಣದಲ್ಲಿ ಅವಕಾಶಗಳು ಸಿಗುತ್ತಿವೆ ಎನ್ನುತ್ತಾರೆ, ನಾನು ಯುವ ಕಾಂಗ್ರೆಸ್ಸಿಗನಾಗಿ ಪಟ್ಟ ಶ್ರಮವನ್ನು ತೇಜಸ್ವಿ ಸೂರ್ಯನಂತವರು ಕಡೆಗಣಿಸುತ್ತಾರೆ. ಇಷ್ಟೆಲ್ಲ ಮಾತನಾಡುವ ಬಿಜೆಪಿ ನಾಯಕರಲ್ಲಿ ಈಗ ಉತ್ತರವಿದೆಯಾ? ಎಂದು ಕೇಳಿದ್ದಾರೆ.