ಬೆಂಗಳೂರು: ಬರ ಪರಿಹಾರ ಅಕ್ರಮ ಕಡೆಗೆ ‘ಫ್ರೂಟ್ಸ್’ ಪರಿಹಾರವಾಗಿದ್ದು, ರೈತರಿಗೆ ಪಾರದರ್ಶಕವಾಗಿ ಪರಿಹಾರ ಹಣ ವಿತರಿಸಲು ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬರ ನಿರ್ವಹಣೆ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಹಣ ವಿತರಣೆಯಲ್ಲಿ ಯಾವುದೇ ದುರುಪಯೋಗವಾಗದಂತೆ ತಡೆಯುವ ನಿಟ್ಟಿನಲ್ಲಿ ಫ್ರೂಟ್ಸ್ -ರೈತರ ಡೇಟಾಬೇಸ್ -ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆಯ ಮೂಲಕ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಬರ ಹಣ ನೀಡುವ ಸಂದರ್ಭದಲ್ಲಿ ಸಾಕಷ್ಟು ದುರುಪಯೋಗವಾಗಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಐಡಿ ಕ್ರಿಯೇಟ್ ಮಾಡಿಕೊಳ್ಳಲು ಜಾಗೃತಿ ಅಭಿಯಾನ ನಡೆಸಲು ಸೂಚಿಸಲಾಗಿದೆ. ಜಮೀನು ಹಾಗೂ ಜಮೀನಿನ ಬೆಳೆ ವಿಸ್ತರಣೆ ಸೇರಿದಂತೆ ಎಲ್ಲವನ್ನು ಒದಗಿಸಲು ನವೆಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.