ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ದೀಪಾವಳಿ ಹಬ್ಬದ ಜೊತೆಗೆ ವಾರಾಂತ್ಯ ರಜೆ ಒಟ್ಟಿಗೆ ಬಂದಿದ್ದು, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ, ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ.
ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಖಾಸಗಿ ಬಸ್ ಗಳು ಪ್ರಯಾಣದರ ಹೆಚ್ಚಳ ಮಾಡಿವೆ. ಕೆಲವು ಬಸ್ ಗಳು ಟಿಕೆಟ್ ದರವನ್ನು ಎರಡು ಪಟ್ಟು, ಮೂರು ಪಟ್ಟು ಹೆಚ್ಚಳ ಮಾಡಿವೆ ಎಂದು ಹೇಳಲಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಗಳಲ್ಲಿ 700 ರಿಂದ 1000 ರೂ.ವರೆಗೆ ಇದ್ದ ದರ ಈಗ 1500 ರಿಂದ 3000 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಮಂಗಳೂರಿಗೆ 700 ರಿಂದ 950 ರೂ.ವರೆಗೆ ಇದ್ದ ಟಿಕೆಟ್ ದರ 1400ನಿಂದ 2000 ರೂ.ವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ಖಾಸಗಿ ಬಸ್ ನವರು ಬರೆ ಎಳೆದಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ವತಿಯಿಂದ ದೀಪಾವಳಿ ಪ್ರಯುಕ್ತ 2000 ವಿಶೇಷ ಬಸ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುವುದು. ನವೆಂಬರ್ 10 ರಿಂದ ಕೆಎಸ್ಆರ್ಟಿಸಿ ವಿಶೇಷ ಬಸ್ ಗಳು ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಮತ್ತು ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ವಿಶೇಷ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.