ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿದ್ದು, ಜಾಮೀನಿಗೆ ಹೈಕೋರ್ಟ್ ನೀಡಿದ ಕಾರಣಗಳಿವು.
ವೈದ್ಯರ ಮುಂದೆ ಹೇಳಿಕೆ ನೀಡುವಾಗ ಅತ್ಯಾಚಾರ ಎಂದು ಉಲ್ಲೇಖಿಸಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆಯಲ್ಲಿ ಅತ್ಯಾಚಾರದ ಬಗ್ಗೆ ಚಕಾರವಿಲ್ಲ. ಕೇವಲ ಮೂರರಿಂದ ಐದು ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧದ ಹೇಳಿಕೆ ನೀಡಲಾಗಿದೆ.
ಜಡ್ಜ್ ಮುಂದೆ ನೀಡಿದ ಸಿ.ಆರ್.ಪಿ.ಸಿ. ಸೆಕ್ಷನ್ 164ರ ಹೇಳಿಕೆ ಪರಿಗಣಿಸಿದ ಹೈಕೋರ್ಟ್ ಇತರೆ ಎಂಟು ಬಾಲಕಿಯರ ಮೇಲೆಯೂ ಲೈಂಗಿಕ ದೌರ್ಜನ್ಯದ ಉಲ್ಲೇಖಿಸಲಾಗಿದೆ. ಆದರೆ ಎಂಟು ಬಾಲಕಿಯರು ಈ ಆರೋಪ ನಿರಾಕರಿಸಿದ್ದರು.
ವೈದ್ಯಕೀಯ ತಪಾಸಣೆ ನಡೆಸಿದಾಗ ಅತ್ಯಾಚಾರಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ವೈದ್ಯಕೀಯ ವರದಿಗೂ ಸಿ.ಆರ್.ಪಿ.ಸಿ. ಸೆಕ್ಷನ್ 164ರ ಹೇಳಿಕೆಗೂ ಸಾಮ್ಯತೆ ಇದೆ. ಮಕ್ಕಳ ತಂದೆ, ಅಜ್ಜಿ ಹೇಳಿಕೆಗಳು ಅತ್ಯಾಚಾರ ಆರೋಪಕ್ಕೆ ವಿರುದ್ಧವಾಗಿದ್ದವು.
ಹಾಸ್ಟೆಲ್ ನಿಂದ ಮನೆಗೆ ಬಂದಾಗ ಮಕ್ಕಳು ಸಂತೋಷವಾಗಿರುತ್ತಿದ್ದರು. ಯಾವುದೇ ದೂರುಗಳಿರಲಿಲ್ಲವೆಂದು ಹೇಳಿಕೆ ನೀಡಿದ್ದರು. ಹಾಸ್ಟೆಲ್ ತೊರೆದ ಮಕ್ಕಳು ಮನೆಗೆ ತೆರಳದೆ ಬೆಂಗಳೂರಿಗೆ ತೆರಳಿದ್ದು ಏಕೆ? ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ಮಕ್ಕಳ ಕಲ್ಯಾಣ ಮಂಡಳಿ ಮುಂದೆ ಹಾಜರುಪಡಿಸದೆ ತಮ್ಮ ಬಳಿ ಇಟ್ಟುಕೊಂಡಿದ್ದು ಏಕೆ ಎಂದು ಮುರುಘಾ ಶ್ರೀ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪುರಸ್ಕಾರ ನೀಡಲಾಗಿದೆ. ಜಾಮೀನು ನೀಡಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಆದೇಶಿಸಿದ್ದಾರೆ.