ಸ್ವಲ್ಪ ಮೈ ಬಿಸಿ ಆಗ್ಲಿ ಇಲ್ಲ ಶೀತದ ಅನುಭವವಾಗ್ಲಿ ನಾವು ಮೊದಲು ಮಾಡೋದು ಮಾತ್ರೆ ನುಂಗುವ ಕೆಲಸ. ಅನೇಕರು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡ್ತಾರೆ. ಒಂದು ಮಾತ್ರೆ ಒಳಗೆ ಹೋಗ್ತಿದ್ದಂತೆ ದೇಹ ಬೆಚ್ಚಗಾಗುವುದಲ್ಲದೆ ಜ್ವರದ ಲಕ್ಷಣ ಕಡಿಮೆ ಆಗುತ್ತದೆ. ತಕ್ಷಣ ಜ್ವರ ಕಡಿಮೆಯಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಪ್ಯಾರಸಿಟಮಾಲ್ ಮಾತ್ರೆ ಮೊರೆ ಹೋಗ್ತಾರೆ. ಪದೇ ಪದೇ, ವೈದ್ಯರ ಸಲಹೆ ಇಲ್ಲದೆ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಆಗಾಗ ಅಥವಾ ಮೂರ್ನಾಲ್ಕು ದಿನ ಎರಡೂ ಹೊತ್ತು ನೀವು ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದ್ರಿಂದ ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮವಾಗುತ್ತದೆ. ಪ್ಯಾರಸಿಟಮಾಲ್ ಹಾನಿಕಾರಕವಲ್ಲ ನಿಜ. ಕೆಲವೊಮ್ಮೆ ಇದು ಮೂತ್ರಪಿಂಡ ಮತ್ತು ಯಕೃತ್ತಿಗೆ ಸಂಬಂಧಿಸಿದ ಅಪಾಯಗಳನ್ನು ಹೆಚ್ಚಿಸುತ್ತದೆ.
2021 ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯಿಂದ 227 ಜನರು ಸಾವನ್ನಪ್ಪಿದ್ದಾರೆ. ಜನರು ಅತಿ ಹೆಚ್ಚು ಸೇವನೆ ಮಾಡುವ ಮಾತ್ರೆಯಲ್ಲಿ ಪ್ಯಾರಸಿಟಮಾಲ್ ಮುಂದಿದೆ.
ಸಾಮಾನ್ಯ ಮಟ್ಟದ ಜ್ವರ ಅಥವಾ ತಲೆನೋವು ಇದ್ದರೆ 24 ಗಂಟೆಗಳ ಒಳಗೆ 2000 ಮಿಗ್ರಾಂ ವರೆಗಿನ ಡೋಸ್ ತೆಗೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಡೋಸ್ ತೆಗೆದುಕೊಂಡಾಗ ಹಾಗೂ ಮಾತ್ರೆ ಮಧ್ಯೆ ಸಮಯದ ಅಂತರವಿಲ್ಲದೆ ಹೋದಾಗ ಪ್ರಾಣಕ್ಕೆ ಅಪಾಯ. ಇದನ್ನು ದ್ರವರೂಪದಲ್ಲಿ ಸೇವನೆ ಮಾಡುವಾಗ ಜನರು ಪ್ರಮಾಣವನ್ನು ಸರಿಯಾಗಿ ಲೆಕ್ಕ ಮಾಡುವುದಿಲ್ಲ ಎನ್ನುತ್ತಾರೆ ತಜ್ಞರು.
ನೀವು ಹೆಚ್ಚಿನ ಪ್ರಮಾಣದಲ್ಲಿ ಪ್ಯಾರಸಿಟಮಾಲ್ ಸೇವನೆ ಮಾಡಿದ್ದೀರಿ ಎಂಬುದು ಗೊತ್ತಾಗುವುದು ಕಷ್ಟ. ಕೆಲವರಿಗೆ ವಾಂತಿ ಕಾಣಿಸಿಕೊಳ್ಳುತ್ತದೆ. ಯಕೃತ್ತಿನ ಬಳಿ ನೋವು ಕಾಣಿಸುತ್ತದೆ. ಮಾನಸಿಕ ಗೊಂದಲ. ಮೂತ್ರ ವಿಸರ್ಜನೆಯ ಕೊರತೆ, ವೇಗದ ಉಸಿರಾಟದ ಲಕ್ಷಣ ಕಾಣಿಸಿಕೊಳ್ಳುವುದಿದೆ.