ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗುತ್ತಿದೆ. ಆದರೆ ಕೆಲವರಿಗೆ ಇನ್ನೂ ಹಣ ಜಮೆ ಆಗಿಲ್ಲ. ಕೆಲವರಿಗೆ ಹಣ ವಿಳಂಬ ಆಗುತ್ತಿದೆ.
ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, 15 ದಿನದೊಳಗೆ ಎಲ್ಲರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಬರಲಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ. ಹೀಗಾಗಿ ಇಂದು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೆಂಗಳೂರು ಒನ್ ಕೇಂದ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಶ್ವರಂ ಬೆಂಗಳೂರು ಒನ್ ಸೆಂಟರ್ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ನಡೆಸಿ ಪ್ರತಿ ಜಿಲ್ಲೆಯಿಂದಲೂ ಮಾಹಿತಿ ಪಡೆಯುತ್ತಿದ್ದಾರೆ.
ಇನ್ನೂ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್ಡೇಟ್ ಮಾಡಿಸಲು ಸೂಚನೆ ನೀಡಲಾಗಿದೆ.ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಮಾಹೆಯಾನ 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.