ಬ್ರೈನ್ ಟ್ಯೂಮರ್ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಯಿಂದ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಆರಂಭದಲ್ಲಿ ಪತ್ತೆಯಾಗದಿರುವುದೇ ಸಾವಿಗೆ ಮೊದಲ ಕಾರಣವಾಗ್ತಿದೆ. ಬ್ರೈನ್ ಟ್ಯೂಮರ್ ಸಾವನ್ನು ಕಡಿಮೆ ಮಾಡಲು ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗ ಬೆರಳಚ್ಚು ಪರೀಕ್ಷೆ ಪ್ರಯೋಗ ನಡೆದಿದೆ. ರೋಗಿಗಳು ಮನೆಯಲ್ಲಿ ಬಳಸಬಹುದಾದ ಸರಳ ಪರೀಕ್ಷಾ ಕಿಟ್ ರಚಿಸುವುದು ಯೋಜನೆಯ ಗುರಿಯಾಗಿದೆ.
ಬೆರಳ ಚುಚ್ಚುವ ಪರೀಕ್ಷೆ, ಮೆದುಳಿನಲ್ಲಿರುವ ಆರಂಭಿಕ ಗಡ್ಡೆಯನ್ನು ಪತ್ತೆ ಮಾಡುವ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬ್ರೈನ್ ಟ್ಯೂಮರ್ ಮೊದಲೇ ಪತ್ತೆಯಾದ್ರೆ ಅದನ್ನು ಆರಂಭದಲ್ಲಿಯೇ ಗುಣಪಡಿಸಬಹುದು. ಗೆಡ್ಡೆ ಮತ್ತೆ ಬರುವ ಸಾಧ್ಯತೆಯಿದ್ದು, ಆಗಾಗ ಪರೀಕ್ಷೆಗೆ ಒಳಗಾಗುವುದು ಮುಖ್ಯವಾಗುತ್ತದೆ.
ಈ ಬೆರಳ ಚುಚ್ಚುವ ಪರೀಕ್ಷೆ ಬಹಳ ಸುಲಭ. ಹಾಗೇ ಎಂ ಆರ್ ಐ ಸ್ಕ್ಯಾನ್‌ಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಸದ್ಯ ಬ್ರೈನ್ ಟ್ಯೂಮರ್ ಪತ್ತೆ ಮಾಡಲು ಎಂ ಆರ್ ಐ ಸ್ಕ್ಯಾನಿಂಗ್ ಬಳಕೆ ಮಾಡಲಾಗ್ತಿದೆ. ಬೆರಳ ಚುಚ್ಚುವ ಪರೀಕ್ಷೆ ಬಂದಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಹಣ ಉಳಿಯಲಿದೆ. ಹಾಗೇ ಆರಂಭದಲ್ಲಿಯೇ ಸಮಸ್ಯೆ ಪತ್ತೆ ಆಗುವ ಕಾರಣ ರೋಗಿಗಳ ಜೀವ ಉಳಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬ್ರೈನ್ ಟ್ಯೂಮರ್ ಗೆ ಒಳಗಾದ ವ್ಯಕ್ತಿ ಶಸ್ತ್ರಚಿಕಿತ್ಸೆ ನಂತ್ರವೂ ಎಚ್ಚರಿಕೆಯಿಂದ ಇರಬೇಕು. 6 ತಿಂಗಳ ನಂತರ ಎಂಆರ್‌ಐ ಮಾಡಿಸಬೇಕು. ಕೆಲವರಿಗೆ ಈ ಸಮಯದಲ್ಲಿ ಮತ್ತೆ ಗಡ್ಡೆ ಬೆಳೆಯುವ ಅಪಾಯವಿರುತ್ತದೆ. ಎಲ್ಲ ರೋಗಿಗಳು ಎಂ ಆರ್ ಐ ಸ್ಕ್ಯಾನ್ ಮಾಡಿಸುವಷ್ಟು ಸಮರ್ಥರಾಗಿರೋದಿಲ್ಲ. ಅವರಿಗೆ ಇದು ನೆರವಾಗಲಿದೆ. ಮನೆಯಲ್ಲೇ ಅವರು ಪರೀಕ್ಷೆಗೆ ಒಳಪಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.