ಕಲಬುರ್ಗಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ರಾಜ್ಯಾಧ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದೆ. ಎರಡು ದಿನಗಳ ಹಿಂದಷ್ಟೇ ಕಲಬುರ್ಗಿಯ ಆತನ ನಿವಾಸದ ಮೇಲೆ ದಾಳಿ ನಡೆಸಿದಾಗ ರುದ್ರೇಗೌಡ ಪಾಟೀಲ್ ಕಾಂಪೌಂಡ್ ಹಾರಿ ಪರಾರಿಯಾಗುತ್ತಿರುವ ದೃಶ್ಯ ಬೆಳಕಿಗೆ ಬಂದಿತ್ತು.
ಈ ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಈಗ ರುದ್ರೇಗೌಡ ಪಾಟೀಲ್ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸಿದ್ದಾರೆ. ಕಲಬುರ್ಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಆತನ ಬಗ್ಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನೊಂದೆಡೆ ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿಯೂ ರುದ್ರೇಗೌಡನಿಗಾಗಿ ಹುಡುಕಾಟ ನಡೆದಿದೆ. ಈ ನಡುವೆ ರುದ್ರೇಗೌಡ ಪಾಟೀಲ್ ಮಹಾರಾಷ್ಟ್ರದ ಸೊಲ್ಲಾಪು ಅಥವಾ ಪುಣೆಯಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸೊಲ್ಲಾಪುರ, ಪುಣೆ ಭಾಗದಲ್ಲಿ ಪೊಲೀಸರು ಹುಡುಕಾಟ ಚುರುಕುಗೊಳಿಸಿದ್ದಾರೆ.