ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಸಂಚಲನ ಆಯೋಜಿಸಿದ್ದ 2023ನೇ ಸಾಲಿನ ಕರ್ನಾಟಕ ಚಲನಚಿತ್ರೋತ್ಸವ ಹಾಗೂ ಪ್ರಶಸ್ತಿ ಸಮಾರಂಭ ನಿನ್ನೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಪುನೀತ ಪ್ರಶಸ್ತಿ” ಹಾಗೂ “ರಾಜರತ್ನ ಪ್ರಶಸ್ತಿ” ನೀಡಲಾಯಿತು.
ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಬಹುಭಾಷಾ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿಗೆ 2023ರ “ರಾಜರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ ಹಲವಾರು ಭಾಷೆಗಳಲ್ಲಿ 190 ಕ್ಕೂ ಹೆಚ್ಚು ಚಲನಚಿತ್ರಗಳ ಗೀತೆಗೆ ಪ್ರಿಯದರ್ಶಿನಿ ಧ್ವನಿ ನೀಡಿದ್ದು10 ಭಾಷೆಗಳಲ್ಲಿ 900 ಕ್ಕೂ ಹೆಚ್ಹು ಖಾಸಗಿ ಆಲ್ಬಮ್‌ಗಳ ಹಾಡುಗಳನ್ನು ಹಾಡಿದ್ದಾರೆ. ಚಲನಚಿತ್ರ ಸಂಗೀತದಲ್ಲಿ ಪಿಎಚ್‌ಡಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹಿರಿಮೆ ಇವರದ್ದು.
ಡಾ.ರಾಜ್‌ಕುಮಾರ್ ಅವರ ಕುಟುಂಬ ಅವರ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ನಾನು ಅವರಿಗೆ ಋಣಿಯಾಗಿದ್ದೇನೆ. ನನ್ನ ಮೊದಲ ಸಂಗೀತ ಆಲ್ಬಂ ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದರು ಮತ್ತು ಎರಡನೆಯದನ್ನು ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದರು. ಇಂದು ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ ರವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆಯುತ್ತಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ, ನನ್ನನ್ನು ಸದಾ ಪ್ರೋತ್ಸಾಹಿಸುತ್ತಿರುವ ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡ ಜನತೆಗೆ ನಾನು ಎಂದೆಂದಿಗೂ ಚಿರಋಣಿ, ಈ ಪ್ರಶಸ್ತಿ ನೀಡಿದ ಸಂಚಲನ ಸಂಸ್ಥೆಯ ಚಂದ್ರಶೇಖರ್ ಮಾಡಲಗೆರೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದರು ಪ್ರಿಯದರ್ಶಿನಿ.
ಇದೇ ಸಂದರ್ಭದಲ್ಲಿ ಹಲವಾರು ಚಿತ್ರಗಳ ಪ್ರದರ್ಶನ ನಡೆಯಿತು. ವಿವಿಧ ವರ್ಗಗಳಲ್ಲಿ ಪ್ರಶಸ್ತಿ ನೀಡಲಾಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ನಟ ಡಾ. ಚಿಕ್ಕಹೆಜ್ಜಾಜಿ ಮಹದೇವ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗೀತರಚನೆಕಾರ ಡಾ. ವಿ.ನಾಗೇಂದ್ರ ಪ್ರಸಾದ್, ಡಾ.ಶರಣು ಹುಲ್ಲೂರ್, ನಟ ಗಣೇಶ್ ರಾವ್ ಕೇಸರ್ಕರ್, ಸಂಗೀತ ನಿರ್ದೇಶಕ ಮಹೇಶ್ ಮಹದೇವ್, ನಟಿ ಸುನಾದ ಇನ್ನು ಹಲವಾರು ಉಪಸ್ಥಿತರಿದ್ದರು.