ಧಾರವಾಡ: ವಂಚಕರು ಹಣ ದೋಚಲು ಏನೆಲ್ಲ ನಾಟಕವಾಡುತ್ತಾರೆ ನೋಡಿ. ವ್ಯಕ್ತಿಯೋರ್ವ ಆಪ್ ಮೂಲಕ ಹಣ ವರ್ಗಾಯಿಸಿ ಬಳಿಕ ನಿಮಗೆ ಸಾಲ ಕೊಟ್ಟಿದ್ದೇನೆ ಮರು ಪಾವತಿಸಬೇಕು ಇಲ್ಲವಾದಲ್ಲಿ ಅಶ್ಲೀಲ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸಿ ಬರೋಬ್ಬರಿ 9 ಲಕ್ಷ ದೋಚಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ರಮಾನಂದ ಭುಜಂಗ ಎಂಬುವವರಿಗೆ ವಂಚಕ ಹಿರೋ ರುಪೀ ಲೋನ್ ಹೆಸರಿನ ಅಪ್ಲಿಕೇಷನ್ ನಿಂದ ಹಣ ವರ್ಗಾಯಿಸಿದ್ದ. ಬಳಿಕ ವಿವಿಧ ವಾಟ್ಸಪ್ ನಂಬರ್ ಗಳಿಂದ ಕರೆ ಮಾಡಿ ನಿಮಗೆ ಸಾಲ ನೀಡಲಾಗಿದ್ದು, ತಕ್ಷಣ ಮರು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಫೋಟೋಗಳನ್ನು ಅಶ್ಲೀಲ ಚಿತ್ರಗಳಿಗೆ ಜೋಡಣೆ ಮಾಡಿ, ಸಂಬಂಧಿಕರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಹೆದರಿಸಿದ್ದಾನೆ.
ಬೆದರಿಕೆ ಒಡ್ಡಿ ವಂಚಕ, ಎರಡು ಹಂತದಲ್ಲಿ ಒಟ್ಟು 9 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾನಂತೆ. ಇಷ್ಟಾದರೂ ಸುಮ್ಮನಾಗದೇ ರಮಾನಂದ ಅವರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲ ಚಿತ್ರಗಳ ಜೊತೆ ಜೋಡಿಸಿ ಸ್ನೇಹಿತರಿಗೆ, ಸಂಬಂಧಿಕರಿಗೆ ಕಳುಹಿಸಿದ್ದಾನೆ. ಅಲ್ಲದೇ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನಂತೆ. ಇದರಿಂದ ಬೇಸತ್ತು ರಮಾನಂದ ಧಾರವಾಡ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.