ಭಾರಿ ಶಸ್ತ್ರಸಜ್ಜಿತ ಆರು ಭಯೋತ್ಪಾದಕರ ಗುಂಪು ಶನಿವಾರ ಮುಂಜಾನೆ ಪಂಜಾಬ್ ಪ್ರಾಂತ್ಯದ ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ತರಬೇತಿ ನೆಲೆಯ ಮೇಲೆ ದಾಳಿ ನಡೆಸಿದ್ದು, ಮೂರು ವಿಮಾನಗಳನ್ನು ಹಾನಿಗೊಳಿಸಿದೆ.
ಹಲವು ಆತ್ಮಾಹುತಿ ಬಾಂಬ್ ದಾಳಿಕೋರರು ಶನಿವಾರ ಬೆಳಿಗ್ಗೆ ಮಿಯಾನ್ವಾಲಿ ತರಬೇತಿ ವಾಯುನೆಲೆಗೆ ನುಗ್ಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನ ವಾಯು ಪಡೆ ತಿಳಿಸಿದೆ.
ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸಿಕೊಂಡಿವೆ. ಮಿಯಾನ್ವಾಲಿ ತರಬೇತಿ ವಾಯುನೆಲೆಯ ಮೇಲಿನ ದಾಳಿಯ ಹೊಣೆಯನ್ನು ತೆಹ್ರಿಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ವಹಿಸಿಕೊಂಡಿದೆ. ವಾಯುನೆಲೆಯಲ್ಲಿ 40 ಸಣ್ಣ ಮತ್ತು ದೊಡ್ಡ ವಿಮಾನಗಳನ್ನು ನಾಶಪಡಿಸಿದ್ದೇವೆ ಎಂದು ಟಿಜೆಪಿ ವಕ್ತಾರ ಮುಲ್ಲಾ ಮುಹಮ್ಮದ್ ಖಾಸಿಮ್ ಹೇಳಿದ್ದಾರೆ.
ಪಾಕಿಸ್ತಾನ ಸೇನೆಯು ದಾಳಿಯನ್ನು ವಿಫಲಗೊಳಿಸಿದೆ ಮತ್ತು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಮತ್ತು ಇತರ ಮೂವರನ್ನು ಮೂಲೆಗುಂಪು ಮಾಡಿದೆ ಎಂದು ಹೇಳಿದೆ. ಮಿಯಾನ್ವಾಲಿ ವಾಯುನೆಲೆಯು ಪಾಕಿಸ್ತಾನದ ವಾಯುಪಡೆಯ ಉತ್ತರ ಕಮಾಂಡ್ ತರಬೇತಿ ನೆಲೆಯಾಗಿದೆ ಮತ್ತು ಇದನ್ನು “ಪ್ರಮುಖ ನೆಲೆ” ಎಂದು ಪರಿಗಣಿಸಲಾಗಿದೆ.