ಬೆಂಗಳೂರು: ಜಾತಿಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದು, ಕಾಂತರಾಜ್ ವರದಿಯನ್ನು ಬೆಂಕಿಗೆ ಹಾಕಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸದಸ್ಯ ಕಾರ್ಯದರ್ಶಿ ಸಹಿಯೇ ಇಲ್ಲದ ಕಾಂತರಾಜ್ ರಿಪೋರ್ಟ್ ನ್ನು ತೆಗೆದುಕೊಂಡು ಹೋಗಿ ಬೆಂಕಿಗೆ ಹಾಕಿ ಸುಡಬೇಕು. ಕಾಂತರಾಜ್ ವರದಿ ವೈಜ್ಞಾನಿಕವೇ ಅಲ್ಲ. ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ನಾಮಕಾವಸ್ತೆ ಸಿದ್ಧತೆ ಮಾಡುತ್ತಿದ್ದಾರೆ ಎಂದರು.
ಕಾಂತರಾಜ್ ವರದಿ ಬಗ್ಗೆ ಇಬ್ಬರು ಈಗ ಬಡಿದಾಡುತ್ತಿದ್ದಾರೆ. ನಾನೇ ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಪ್ರೊಜೆಕ್ಟ್ ಮಾಡಿಕೊಳ್ಳಲು ಸಿದ್ದರಾಮಯ್ಯ ಕಾಂತರಾಜ್ ರಿಪೋರ್ಟ್ ಬಗ್ಗೆ ಎಂಟು ವರ್ಷಗಳಿಂದ ಮತ್ತೆ ಮತ್ತೆ ಹೇಳಿದರು. ನಾಳೆ ಬಾ ಅನ್ನುವುದು ಸಿದ್ದರಾಮಯ್ಯ ಅವರ ಘೋಷಣೆಯಾಗಿದೆ. ವರದಿ ಬಿಡುಗಡೆ ಮಾಡಿದರೆ ಒಂದೇ ದಿನದಲ್ಲಿ ಕೋರ್ಟ್ ನಲ್ಲಿ ಬಿದ್ದು ಹೋಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಒಂದು ಅಭಿಪ್ರಾಯ, ಡಿಸಿಎಂ ಒಂದು ಅಭಿಪ್ರಾಯ ಹೊಂದಿದ್ದಾರೆ. ಒಂದೇ ಸರ್ಕಾರದಲ್ಲಿ ಎರಡು ಅಭಿಪ್ರಾಯವಿರುವುದರಿಂದ ಅವರಿಗೆ ಮುಂದುವರೆಯಲು ಅಧಿಕಾರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.