ಬೆಳಗಾವಿ: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮದ ವೇಳೆ ಬೆಳಗಾವಿಯಲ್ಲಿ ಕರಾಳದಿನಾಚರಣೆ ಮಾಡಿದ್ದ ಎಂ.ಇ.ಎಸ್ ಪುಂಡರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಇಡೀ ನಾಡು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಿದ್ದರೆ ನ. 1ರಂದು ಗಡಿ ಜಿಲ್ಲೆ ಬೆಳಗಾವಿಗೆ ನುಗ್ಗಿದ್ದ ಎಂಇಎಸ್ ನ ಕಾರ್ಯಕರ್ತರು ನಿಷೇಧದ ನಡುವೆಯೂ ಕರಾಳದಿನಾಚರಣೆ ಮಾಡಿದ್ದರು. ಕರಾಳದಿನಾಚರಣೆ ಮಾಡಿದ್ದ ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ್, ರಂಜಿತ್ ಚವ್ಹಾಣ್, ಸರಿತಾ ಪಾಟೀಲ್, ಸಾರಿಕಾ ಪಾಟೀಲ್, ಅಂಕುಶ ಕೇಸರಕರ್ ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಂ.ಇ.ಎಸ್ ಕರಾಳದಿನಾಚರಣೆಗೆ ಅವಕಾಶವಿಲ್ಲ, ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದರೂ, ನಿಯಮಗಳನ್ನು ಗಾಳಿಗೆ ತೂರಿದ್ದ ಎಂ.ಇ.ಎಸ್ ಕಾರ್ಯಕರ್ತರು ಜಿಲ್ಲೆಯಲ್ಲಿ ಪುಂಡಾಟ ಮೆರೆದಿದ್ದರು. ಕರಾಳದಿನಾಚರಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಂ.ಇ.ಎಸ್ ಪುಂಡರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.