ಕಳೆದ 50 ವರ್ಷಗಳಲ್ಲಿ ಪುರುಷರ ವೀರ್ಯದ ಸಂಖ್ಯೆಯು ಜಾಗತಿಕವಾಗಿ 50 ಪ್ರತಿಶತಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಈ ಕುಸಿತಕ್ಕೆ ನಾವು ಸೇವಿಸುವ ಆಹಾರ ಮತ್ತು ನೀರಿನಲ್ಲಿ ಇರುವ ಮಾಲಿನ್ಯ, ವಿಷಕಾರಿ ಅಂಶಗಳೇ ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಆದ್ರೀಗ ಸಂಶೋಧನೆಯೊಂದರಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಅತಿಯಾದ ಮೊಬೈಲ್ ಬಳಕೆ ಕೂಡ ವೀರ್ಯ ಕುಸಿತಕ್ಕೆ ಕಾರಣವೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಮೊಬೈಲ್ ಫೋನ್ ಬಳಕೆ, ಕಡಿಮೆ ವೀರ್ಯ ಸಾಂದ್ರತೆ ಮತ್ತು ಒಟ್ಟು ವೀರ್ಯಾಣು ಎಣಿಕೆ ನಡುವೆ ಸಂಭವನೀಯ ಸಂಪರ್ಕವಿದೆ. ಜಿನೀವಾ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನವು 2005 ಮತ್ತು 2018 ರ ನಡುವೆ ಮಿಲಿಟರಿ ನೇಮಕಾತಿ ಕೇಂದ್ರಗಳಲ್ಲಿ ಸಂಗ್ರಹಿಸಲಾದ 18 ರಿಂದ 22 ವರ್ಷ ವಯಸ್ಸಿನ 2,886 ಪುರುಷರ ಡೇಟಾವನ್ನು ಪರಿಶೀಲಿಸಿದೆ.
ಮೊಬೈಲ್ ಫೋನ್ ಬಳಕೆ ಮತ್ತು ವೀರ್ಯ ಚಲನಶೀಲತೆ ಕುಸಿತದ ಮಧ್ಯೆ ನೇರ ಸಂಬಂಧ ಪತ್ತೆಯಾಗಿಲ್ಲ. ಇದು ವೀರ್ಯದ ಸಾಂದ್ರತೆ ಮತ್ತು ಎಣಿಕೆಯ ನಡುವಿನ ಸಂಭವನೀಯ ಸಂಬಂಧವನ್ನು ಬಹಿರಂಗಪಡಿಸಿದೆ.
ದಿನಕ್ಕೆ 20ಕ್ಕಿಂತ ಹೆಚ್ಚು ಬಾರಿ ತಮ್ಮ ಫೋನ್‌ಗಳನ್ನು ಬಳಸುವ ಪುರುಷರು ಕಡಿಮೆ ವೀರ್ಯ ಸಾಂದ್ರತೆಯನ್ನು ಹೊಂದಿದ್ದಾರೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಫೋನ್‌ಗಳನ್ನು ಕಡಿಮೆ ಬಳಸುವವರು ತುಲನಾತ್ಮಕವಾಗಿ ಹೆಚ್ಚಿನ ವೀರ್ಯ ಸಾಂದ್ರತೆಯನ್ನು ಹೊಂದಿದ್ದಾರೆ. ಈ ವ್ಯತ್ಯಾಸವು ದಿನಕ್ಕೆ ಒಂದು ಬಾರಿ ಅಥವಾ ಅದಕ್ಕಿಂತಲೂ ಕಡಿಮೆ ಫೋನ್‌ಗಳನ್ನು ಬಳಸುವವರಿಗೆ ಹೋಲಿಸಿದರೆ, ವಿಪರೀತ ಫೋನ್ ಬಳಕೆ ಮಾಡುವವರ ವೀರ್ಯ ಸಾಂದ್ರತೆಯಲ್ಲಿ 21 ಪ್ರತಿಶತದಷ್ಟು ಕುಸಿತವಿದೆ.
ವೀರ್ಯದ ಗುಣಮಟ್ಟ ಏಕೆ ಮುಖ್ಯ?
ವೀರ್ಯದ ಗುಣಮಟ್ಟವು ಪುರುಷ ಫಲವತ್ತತೆಗೆ ಬೇಕಾದ ಪ್ರಮುಖ ಅಂಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪುರುಷರ ವೀರ್ಯ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 15 ಮಿಲಿಯನ್‌ಗಿಂತ ಕಡಿಮೆಯಿದ್ದರೆ ಮಹಿಳೆ ಗರ್ಭಿಣಿಯಾಗಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ವೀರ್ಯದ ಸಾಂದ್ರತೆಯು ಪ್ರತಿ ಮಿಲಿಲೀಟರ್‌ಗೆ 40 ಮಿಲಿಯನ್‌ಗಿಂತ ಕಡಿಮೆಯಾದರೆ, ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ.
ವೀರ್ಯದ ಆರೋಗ್ಯವನ್ನು ಸುಧಾರಿಸಲು ಬಯಸುವ ಪುರುಷರು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ವ್ಯಾಯಾಮ, ಸಮತೋಲಿತ ಆಹಾರ, ತೂಕ ನಿರ್ವಹಣೆ, ಧೂಮಪಾನವನ್ನು ತ್ಯಜಿಸುವುದು ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಹೀಗೆ ಇವೆಲ್ಲವನ್ನು ಪಾಲಿಸುವ ಜೊತೆಗೆ ಫೋನ್ ಬಳಕೆಯನ್ನೂ ಕಡಿಮೆ ಮಾಡಬೇಕು.