
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿರುವ ಹೇಳಿಕೆಯು ವ್ಯಾಪಕ ಟ್ರೋಲ್ ಗೆ ಒಳಗಾಗಿದೆ. ವಾರದಲ್ಲಿ 70 ಗಂಟೆ ಕೆಲಸವೇ ಮಾಡಿದರೆ ಪರಿಣಾಮ ಏನಾಗಬಹುದು ಎಂಬ ಚರ್ಚೆ ಜೋರಾಗಿದೆ.
ಈ ನಡುವೆ ಹೈದರಾಬಾದ್ ಮೂಲದ ಕಾಮಿಡಿಯನ್ ವಿವೇಕ್ ಮುರಳೀಧರ್ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಒಂದು ವೇಳೆ ನಾವು ವಾರದಲ್ಲಿ 70 ಗಂಟೆ ನಿಜವಾಗಿಯೂ ಕೆಲಸ ಮಾಡಿದರೆ ನಮ್ಮ ಜೀವನ ಹೇಗೆ ಇರಬಹುದು ಅನ್ನೋದನ್ನ ಹಾಸ್ಯಮಯವಾಗಿ ತಿಳಿಸಿದ್ದಾರೆ. ವಾರದಲ್ಲಿರುವ 168 ಗಂಟೆಯಲ್ಲಿ ನಿತ್ಯ 7 ಗಂಟೆ ನಿದ್ದೆಯ ಅವಧಿಯನ್ನು ಕಡಿತಗೊಳಿಸಿದ ಬಳಿಕ ಉಳಿದ ಸಮಯದಲ್ಲಿ ಒಬ್ಬ ಮನುಷ್ಯ ಹೇಗೆಲ್ಲ ಬದುಕಬೇಕಾಗಿ ಬರಬಹುದು ಅನ್ನೋದನ್ನ ಲೆಕ್ಕಾಚಾರ ಸಮೇತ ತಿಳಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳನ್ನು ಪಡೆದುಕೊಂಡಿದೆ. ಅನೇಕರು ಕೋಟ್ಯಾಧಿಪತಿಗಳು ಎಂದಿಗೂ ಬಡವರನ್ನ ದಿನವಿಡೀ ದುಡಿಸೋಕೆ ನೋಡುತ್ತಾರೆ. ಇದು ಆಧುನಿಕ ಯುಗದ ಜೀತಪದ್ಧತಿ ಅಂತಾ ಹೇಳಿದ್ದಾರೆ. ಇನ್ನೂ ಕೆಲವರು ನಮಗೆ ನಾರಾಯಣಮೂರ್ತಿಯವರ ಮೇಲೆ ಗೌರವ ಇದೆ. ಆದರೆ ಒಬ್ಬ ವ್ಯಕ್ತಿಗೆ ಅತೀ ಕಡಿಮೆ ಸಂಬಳ ನೀಡಿ ಈ ರೀತಿ ದುಡಿಸಿಕೊಳ್ಳುವ ಬಗ್ಗೆ ಯೋಚಿಸೋದು ತಪ್ಪು ಎಂದಿದ್ದಾರೆ.