ಮಂಗಗಳ ಕಾಟ ಕೆಲವೊಮ್ಮೆ ವಿಪರೀತವಾಗಿರುತ್ತೆ. ಪ್ರವಾಸಿ ತಾಣಗಳಲ್ಲಿ ಮಂಗಗಳ ಕಾಟ ಹೆಚ್ಚಿರುತ್ತದೆ. ಪ್ರವಾಸಿಗರ ವಸ್ತುಗಳನ್ನು ಅವು ಹೊತ್ತೊಯ್ಯುತ್ತವೆ. ಕೆಲ ಗ್ರಾಮೀಣ ಪ್ರದೇಶಗಳಲ್ಲೂ ಮಂಗಗಳ ಹಿಂಡು ಹಾವಳಿ ಮಾಡುತ್ತದೆ. ಮನೆಯೊಳಗೆ ನುಗ್ಗಿ ಮನುಷ್ಯರಿಗೆ ಗಾಯಗೊಳಿಸಿದ ಘಟನೆಗಳಿವೆ. ಈಗ ಮಂಗವೊಂದು ಮೂರು ವರ್ಷದ ಹುಡುಗಿಯನ್ನು ಹೊತ್ತೊಯ್ದ ಘಟನೆ ಬೆಳಕಿಗೆ ಬಂದಿದೆ.
ಘಟನೆ ಚೀನಾದ ನೈಋತ್ಯ ಗೈಝೌ ಪ್ರಾಂತ್ಯದಲ್ಲಿ ನಡೆದಿದ. ಮೂರು ವರ್ಷದ ಮಗುವನ್ನು ಮರದ ಕೆಳಗಿ ಬಿಟ್ಟು ಪಾಲಕರು ಹೊಲದ ಕೆಲಸದಲ್ಲಿ ನಿರತರಾಗಿದ್ದರು. ಕೆಲವೇ ಕ್ಷಣಗಳಲ್ಲಿ ಮಗು ಅಲ್ಲಿಂದ ಕಾಣೆಯಾಗಿದೆ. ಮಗು ಇಲ್ಲದೆ ಇರುವುದನ್ನು ನೋಡಿ ಪಾಲಕರು ಕಂಗಾಲಾಗಿದ್ದಾರೆ. ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಮಗುವಿನ ಸುಳಿವು ಸಿಕ್ಕಿಲ್ಲ.
ತಕ್ಷಣ ಮಗುವಿನ ತಂದೆ ಲಿಯು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಹಾಗೂ ಪಾಲಕರು ಹಳ್ಳಿ ಹಳ್ಳಿಗೆ ಹೋಗಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮಂಗವೊಂದು ಮಗುವನ್ನು ಹೊತ್ತೊಯ್ಯುತ್ತಿದ್ದ ವಿಡಿಯೋ ಸಿಕ್ಕಿದೆ. ಅದ್ರ ಆಧಾರದ ಮೇಲೆ ಪೊಲೀಸರು ಬೆಟ್ಟ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪೊಲೀಸರ ಪ್ರಯತ್ನ ಕೊನೆಗೂ ಫಲ ನೀಡಿದೆ. ಬಂಡೆಯ ಅಂಚಿನಲ್ಲಿ ಮಗು ಕಂಡುಬಂದಿದೆ. ಅದೃಷ್ಟವಶಾತ್ ಆಕೆಗೆ ಗಾಯವಾಗಿರಲಿಲ್ಲ.
ಕೋತಿಯ ಬಗ್ಗೆ ಮಗುವಿನ ಬಳಿ ಪ್ರಶ್ನೆ ಕೇಳಲಾಗಿದೆ. ಮಗು ತನ್ನನ್ನು ಹೊತ್ತು ತಂದಿದ್ದು ಕೋತಿ ಎಂಬ ವಿಷ್ಯವನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ ಕೋತಿ ಬೆಟ್ಟದ ಕಡೆ ಹೋಗಿದೆ ಎಂದು ಹೇಳಿದ್ದಾಳೆ. ಮಗುವಿನ ಆರೋಗ್ಯವನ್ನು ವೈದ್ಯರು ಪರೀಕ್ಷಿಸಿದ್ದು, ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿದ್ರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.