ಭಾರತದಲ್ಲಿ ಈವರೆಗೆ ಕಂಡು ಕೇಳರಿಯದ ಬಹುದೊಡ್ಡ ಡೇಟಾ ಸೋರಿಕೆ ಪ್ರಕರಣ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಬಳಿ ಇದ್ದ 81. 5 ಕೋಟಿ ಭಾರತೀಯರ ವಿವರಗಳು ಮಾರಾಟವಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು ಐಸಿಎಂಆರ್ ಈ ಸಂಬಂಧ ದೂರು ದಾಖಲಿಸಿದ ಬಳಿಕ ಸಿಬಿಐ ಈ ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ.
ಎಕ್ಸ್ ಹ್ಯಾಂಡಲ್ನಲ್ಲಿ ಡಾರ್ಕ್ ವೆಬ್ನಲ್ಲಿ ಇದರ ಬಗ್ಗೆ ಸೈಬರ್ ವಂಚಕ ಮಾಹಿತಿ ಹಂಚಿಕೊಂಡಿದ್ದಾನೆ. ಇದರಲ್ಲಿ 81. 5 ಕೋಟಿ ಭಾರತೀಯರ ವೈಯಕ್ತಿಕ ದಾಖಲೆಗಳು ಇವೆ ಎನ್ನಲಾಗಿದೆ. ಹೆಸರು, ಫೋನ್ ನಂಬರ್, ವಿಳಾಸ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ ಇದರಲ್ಲಿ ಇದೆ. ಕೋವಿಡ್ 19 ಪರೀಕ್ಷೆಯ ಸಂದರ್ಭದಲ್ಲಿ ನಾಗರಿಕರಿಂದ ಪಡೆದುಕೊಳ್ಳಲಾಗಿದ್ದ ಮಾಹಿತಿಯನ್ನು ಐಸಿಎಂಆರ್ನಿಂದ ಪಡೆಯಲಾಗಿದೆ ಎಂದು ಥ್ರೆಟ್ ಆಕ್ಟರ್ ಹೇಳಿದ್ದಾರೆ.
ಫೆಬ್ರವರಿಯಿಂದ ಅನೇಕ ಬಾರಿ ಐಸಿಎಂಆರ್ ಮೇಲೆ ಸೈಬರ್ ದಾಳಿ ಪ್ರಯತ್ನ ನಡೆಯುತ್ತಲೇ ಇದೆ. ಈ ಬಗ್ಗೆ ಕೇಂದ್ರೀಯ ಏಜೆನ್ಸಿ ಹಾಗೂ ಕೌನ್ಸಿಲ್ಗೆ ಕೂಡ ಮಾಹಿತಿಯಿತ್ತು. ಐಸಿಎಂಆರ್ನ ಸರ್ವರ್ಗಳನ್ನು ಹ್ಯಾಕ್ ಮಾಡಲು ಕಳೆದೊಂದು ವರ್ಷದಿಂದ ಆರು ಸಾವಿರಕ್ಕೂ ಅಧಿಕ ಬಾರಿ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದಾಖಲೆಗಳನ್ನು ಕಾಪಾಡಿಕೊಳ್ಳಲು ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಐಸಿಎಂಆರ್ಗೆ ಕೇಂದ್ರೀಯ ಏಜೆನ್ಸಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಸಂಬಂಧ ಇನ್ನೂ ಐಸಿಎಂಆರ್ನಿಂದ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ.