ಬೆಂಗಳೂರು: ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರಿಡಲೇಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಟ್ಟಿದ್ದೇವೆ. ಬಸವಣ್ಣ ಇಡೀ ಜಗತ್ತಿಗೆ ಅನುಭವ ಮಂಟಪದ ಪರಿಕಲ್ಪನೆ ನೀಡಿದ್ದಾರೆ. ಜಗತ್ತಿಗೆ ಪ್ರಥಮವಾಗಿ ಪಾರ್ಲಿಮೆಂಟ್ ಕೊಟ್ಟವರು ಬಸವಣ್ಣ. ಹಾಗಾಗಿ ಮೆಟ್ರೋಗೆ ಬಸವಣ್ಣನವರ ಹೆಸರು ಇಡುವುದು ಸೂಕ್ತ ಎಂದು ಹೇಳಿದರು.
ಮೆಟ್ರೋಗೆ ಬಸವಣ್ಣನವರ ಹೆಸರಡುಬೇಕು ಎಂಬುದು ನನ್ನ ಹಾಗೂ ಜನತೆಯ ಒತ್ತಾಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಇನ್ನು ವಿಜಯಪುರ ಜಿಲ್ಲೆಗೆ ಬಸವೇಶ್ವರ ಹೆಸರು ಇಡಲು ಸಚಿವ ಶಿವಾನಂದ ಪಾಟೀಲ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಕೆಲವು ಸಂಘಟನೆಗಳು, ಸ್ಥಳೀಯರು ವಿಜಯಪುರಕ್ಕೆ ಬಸವೇಶ್ವರ ನಗರ ಎಂದು ಹೆಸರಿಡಲು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದಾರೆ. ಬಸವೇಶ್ವರ ಹೆಸರಿಡಲು ಯಾರಿಂದಲೂ ತಕರಾರು, ವಿರೋಧವಿಲ್ಲ. ಹೆಸರು ಬದಲಿಸುವುದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.