ಕೇರಳದ ಕಲಮಸ್ಸೆರಿ ಸ್ಫೋಟದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ವ್ಯಕ್ತಿಯೊಬ್ಬ ತ್ರಿಶೂರ್ ಜಿಲ್ಲೆಯ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತನಿಗೂ, ಸ್ಫೋಟಕ್ಕೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ, ವಿಚಾರಣೆ ಮುಂದುವರೆದಿದೆ.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಸ್ಫೋಟದ ಬಗ್ಗೆ ತುರ್ತು ಕರೆ ಬಂದಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿಯಿಂದ ಸ್ಪೋಟಗೊಂಡ ಸ್ಥಳದಿಂದ ಜನರನ್ನು ಸ್ಥಳಾಂತರಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗಾಯಾಳುಗಳ ಅಂಕಿಅಂಶಗಳನ್ನು ದೃಢಪಡಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಜೆಯಲ್ಲಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ತಕ್ಷಣವೇ ಹಿಂತಿರುಗುವಂತೆ ಆದೇಶಿಸಿದರು. ಸ್ಫೋಟದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದರು.
ಕಲಮಸ್ಸೆರಿಯ ಜಮ್ರಾ ಸಮಾವೇಶ ಕೇಂದ್ರಕ್ಕೆ ಕೇರಳ ಡಿಜಿಪಿ ಆಗಮಿಸಿದ್ದು, ತಕ್ಷಣ ತನಿಖೆ ಆರಂಭಿಸಲಾಗಿದೆ. ಎಸ್ಐಟಿ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಸ್ಫೋಟದ ತನಿಖೆಯ ನಡುವೆಯೇ ಕೇರಳ ಮುಖ್ಯಮಂತ್ರಿ ನಾಳೆ ಸರ್ವಪಕ್ಷ ಸಭೆಗೆ ಕರೆದಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಸೆಕ್ರೆಟರಿಯೇಟ್ನಲ್ಲಿರುವ ಮುಖ್ಯಮಂತ್ರಿಗಳ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ.
ಕೇರಳದಿಂದ ಕರ್ನಾಟಕಕ್ಕೆ ಸಂಚರಿಸುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು, 14 ಗಡಿ ಬಿಂದುಗಳನ್ನು ಹೆಚ್ಚಿನ ಭದ್ರತೆಯಲ್ಲಿ ಇರಿಸಲಾಗಿದೆ
ಕರ್ನಾಟಕ-ಕೇರಳ ಗಡಿಯ ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಕರ್ನಾಟಕ ಅಧಿಕಾರಿಗಳು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ವಾಹನಗಳ ಮೇಲೆ ತಪಾಸಣೆ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದಿಂದ ಕರ್ನಾಟಕಕ್ಕೆ 7 ಪ್ರಮುಖ ಮತ್ತು 7 ಮೈನರ್ ಪಾಯಿಂಟ್ಗಳ ಪ್ರವೇಶವಿದ್ದು, ಇವೆಲ್ಲವೂ ಹೈ ಅಲರ್ಟ್ ಆಗಿರುತ್ತದೆ. ಎಲ್ಲಾ 14 ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎನ್ನಲಾಗಿದೆ.