ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗಮ-ಮಂಡಳಿಗಳ ಹುದ್ದೆಗಳ ಭರ್ತಿಗೆ ಅ.28, 29 ರಂದು ಪರೀಕ್ಷೆ ನಿಗದಿ ಮಾಡಿದೆ.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸಹಿತ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅ.28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಲಿದ್ದು, ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ.
ಇಂದು ಬೆಂಗಳೂರಿನ 72 ಕೇಂದ್ರ ಸೇರಿ ರಾಜ್ಯದ ಒಟ್ಟು 350 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು ಎಲ್ಲಾ ಕೇಂದ್ರಗಳಲ್ಲಿ 1.75 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮೈಸೂರು ಸೇಲ್ಸ್ ಇಂಟನ್ಯಾಷನಲ್ ಲಿಮಿಟೆಡ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಖಾಲಿ ಹುದ್ದೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳ ಹುದ್ದೆಗೆ ಕೆಇಎ ಪರೀಕ್ಷೆ ನಡೆಸುತ್ತಿದೆ.ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಡೌನ್ಲೋಡ್ ಆಗಿದ್ದು, ಕೆಲವರಿಗೆ ಅ.28 ಮತ್ತು 29- ಈ ಎರಡೂ ದಿನಾಂಕಗಳಂದು ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು ಅಂತಹವರು ಎರಡೂ ಕಡೆ ಪರೀಕ್ಷೆ ಬರೆಯಬೇಕು.
ಕೆಲವು ಅಭ್ಯರ್ಥಿಗಳಿಗೆ ಒಂದೇ ದಿನ ಒಂದೇ ಅವಧಿಯಲ್ಲಿ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಅಥವಾ ಪ್ರತ್ಯೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಆಗಿದೆ. ಅಂತಹ ಅಭ್ಯರ್ಥಿಗಳು ಮಾತ್ರ ಯಾವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯತಕ್ಕದ್ದು. ಪರೀಕ್ಷಾ ದಿನದಂದು ಎರಡೂ ಪ್ರವೇಶ ಪತ್ರಗಳನ್ನು ಕೊಠಡಿಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದರು.