ಬೆಂಗಳೂರು : ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಟು ವಿದೇಶಿಯರು ಸೇರಿದಂತೆ 10 ಜನರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಅಪರಾಧ ವಿಭಾಗದ ಪೊಲೀಸರು ಡ್ರಗ್ಸ್ ವಿರುದ್ಧ 15 ದಿನಗಳ ಕಾರ್ಯಾಚರಣೆಯ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು 39 ವರ್ಷದ ಒನಿಯೆಕಾ ಅರ್ನೆಸ್ಟ್ ಮತ್ತು 34 ವರ್ಷದ ಸೈಮನ್ ಬ್ಲೆಸ್ಸಿಂಗ್, 53 ವರ್ಷದ ಕೆನೆತ್ ಚಿಬುಜೋರ್, 34 ವರ್ಷದ ಒಬಿಡೋ ಚಿಜಿಂದ್, 29 ವರ್ಷದ ಕಾಲಿನ್ಸ್ ಒಕ್ವುಚುಕ್ವು, 33 ವರ್ಷದ ಗಸ್ಸಾಮಾ ಆಲ್ಬರ್ಟ್, 38 ವರ್ಷದ ಟೊಚುಕು ಫ್ರಾನ್ಸಿಸ್, ಗುಬೇಂದ್ರ ಸಿ ಮತ್ತು ವಾಜಿದ್ ಖಾನ್ ಎಂದು ಗುರುತಿಸಲಾಗಿದೆ.
ಕಾಡುಗೋಡಿ, ಕೆ.ಆರ್.ಪುರಂ, ಸೋಲದೇವನಹಳ್ಳಿ, ಎಚ್ಎಸ್ಆರ್ ಲೇಔಟ್, ವೈಟ್ಫೀಲ್ಡ್, ಬಾಣಸವಾಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳಿಂದ 3.806 ಕೆಜಿ ಎಂಡಿಎಂಎ ಕ್ರಿಸ್ಟಲ್, 50 ಗ್ರಾಂ ಕೊಕೇನ್, 25 ಎಕ್ಸ್ಟಸಿ ಮಾತ್ರೆಗಳು, 50 ಎಲ್ಎಸ್ಡಿ ಸ್ಟ್ರಿಪ್ಗಳು ಮತ್ತು 5 ಕೆಜಿ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕವಸ್ತುಗಳ ಮೌಲ್ಯ 5.5 ಕೋಟಿ ರೂ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಇತರರಿಂದ ಮಾದಕವಸ್ತುಗಳನ್ನು ಪಡೆದು ತ್ವರಿತವಾಗಿ ಹಣ ಸಂಪಾದಿಸಲು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.