ಬೆಂಗಳೂರು: ರಾಮನಗರ ಜಿಲ್ಲೆ ಬೆಂಗಳೂರು ಸೇರಲಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡುವುದರಲ್ಲಿ ಯಾವುದೇ ನಷ್ಟವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯ ಸಿಗಬೇಕು ಎಂಬುದು ಉದ್ದೇಶ ಎಂದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ರನ್ನು ನಾನು ಭೇಟಿಯಾಗಿಲ್ಲ. ಆದರೆ ಹೆಸರು ಬದಲಾಯಿಸುವುದರಿಂದ ಯಾವುದೇ ತೊಂದರೆ ಇಲ್ಲ, ನಷ್ಟವೂ ಇಲ್ಲ ಮೂಲಭೂತ ಸೌಲಭ್ಯ, ಅನುದಾನ ಹೆಚ್ಚು ಸಿಗಬೇಕು ಎಂದು ಹೇಳಿದರು.
ಇನ್ನು ಎಲ್ಲಾ ಸಚಿವರು ಹಣ ತಿಂದಿದ್ದಾರೆ ಈ ಬಗ್ಗೆ ಆಣೆ ಪ್ರಮಾಣ ಮಾಡಲಿ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಆಣೆ ಪ್ರಮಾಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಅವರ ಸರ್ಕಾರ ಇದ್ದಾಗ ಅವರು ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತು. ಯಾವ ಪಕ್ಷ ಅಧಿಕಾರದಲ್ಲಿ ಇರಬೇಕು ಎಂಬುದನ್ನು ಜನ ಚುನಾವಣೆಯಲ್ಲಿಯೇ ನಿರ್ಧಾರ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ನಮ್ಮ ವಿರುದ್ಧ ಆರೋಪ ಮಾಡುವ ಬದಲು ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ ಎಂದು ಟಾಂಗ್ ನೀಡಿದರು.