ಬೆಂಗಳೂರು : ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಿ, ಅಪಘಾತಕ್ಕೊಳಗಾದ ಅಸಂಘಟಿತ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ(ಪಿಎಂಎಸ್‌ಬಿವೈ) ಅಪಘಾತ ಪರಿಹಾರವನ್ನು ಒದಗಿಸಲಾಗುತ್ತದೆ.
ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದ್ದು, ದಿನಾಂಕ:31-03-2022 ರವರೆಗೆ ನೋಂದಣಿಯಾಗಿ ಮತ್ತು ಈ ದಿನಾಂಕದೊಳಗೆ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ರೂ.2.00 ಲಕ್ಷಗಳ ಅಪಘಾತ ಪರಿಹಾರವನ್ನು ಒದಗಿಸಲಾಗುವುದು.
ಅಪಘಾತದಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್) ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣದ ಕಾರಣದ ಕುರಿತ ವೈದ್ಯಕೀಯ ಪ್ರಮಾಣ ಪತ್ರ, ಎಫ್‌ಐಆರ್/ಪಂಚನಾಮ, ಒಂದು ವೇಳೆ ಫಲಾನುಭವಿಯು ಅಪ್ರಾಪ್ತರಾದಲ್ಲಿ ಪೋಷಕರು ಜಿಲ್ಲಾ ನ್ಯಾಯಾಲಯದಿಂದ ಪೋಷಕತ್ವ ಘೋಷಣೆಯ ಪ್ರಮಾಣ ಪತ್ರ ಒದಗಿಸಬೇಕು.
ಅಪಘಾತದಿಂದ ಅಂಗವೈಕಲ್ಯ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್) ಸಂಖ್ಯೆ, ಅಪಘಾತದಿಂದ ಉಂಟಾದ ಅಂಗವೈಕಲ್ಯವನ್ನು ಸೂಚಿಸುವ ಡಿಸ್‌ಚಾರ್ಜ್ ಸಾರಾಂಶವನ್ನು ಒಳಗೊಂಡಿರುವ ಆಸ್ಪತ್ರೆಯ ದಾಖಲೆ, ಅಂಗವೈಕಲ್ಯದ ಕುರಿತು ಅಧಿಕೃತ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ, ವಿಕಲಚೇತನರ ಕಲ್ಯಾಣ ಇಲಾಖೆಯಿಂದ ನೀಡಲಾದ ಅಂಗವಿಕಲರ ಗುರುತಿನ ಚೀಟಿಯನ್ನು ಸಲ್ಲಿಸಬೇಕು.
ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಯೊಂದಿಗೆ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.