ಮುಂಬೈ: ಸಾಲ ವಸೂಲಿ ಕಿರುಕುಳದಿಂದ ಸಾಲಗಾರರಿಗೆ ಮುಕ್ತಿ ನೀಡಲು ಆರ್‌ಬಿಐ ಕ್ರಮ ಕೈಗೊಂಡಿದೆ. ಬೆಳಗ್ಗೆ 8 ಗಂಟೆಗೆ ಮೊದಲು ರಾತ್ರಿ 9 ಗಂಟೆ ನಂತರ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ನಿರ್ಧರಿಸಿರುವ ಆರ್.ಬಿ.ಐ. ಈ ಕುರಿತು ಕರಡು ನಿಯಮಗಳನ್ನು ಸಿದ್ಧಪಡಿಸಿದೆ. ಸಾಲಗಾರರನ್ನು ಬ್ಯಾಂಕ್ ಗಳ ಸಾಲ ವಸೂಲಿ ಕಿರುಕುಳದಿಂದ ಪಾರು ಮಾಡಲು ಆರ್‌ಬಿಐ ಮುಂದಾಗಿದ್ದು, ಬೆಳಗ್ಗೆ 8 ಗಂಟೆಗೆ ಮೊದಲು ಮತ್ತು ರಾತ್ರಿ 7 ಗಂಟೆ ನಂತರ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ತೀರ್ಮಾನಿಸಿದೆ.
ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಹೊರಗುತ್ತಿಗೆ ನೀಡುವಂತಿಲ್ಲ . ಕೆವೈಸಿ ನಿಯಮಗಳ ಅನುಸರಣೆ, ಸಾಲ ಮಂಜೂರು ನೀತಿ ರೂಪಿಸುವುದು ಸೇರಿದಂತೆ ಪ್ರಮುಖ ಕಾರ್ಯಗಳ ಹೊರಗುತ್ತಿಗೆ ನೀಡಿದಂತೆ ನಿರ್ಬಂಧಿಸಲು ಆರ್‌ಬಿಐ ಕ್ರಮ ಕೈಗೊಂಡಿದೆ.
ನವೆಂಬರ್ 28ರೊಳಗೆ ಸಲಹೆ ಪ್ರತಿಕ್ರಿಯೆ ನೀಡುವಂತೆ ಆಹ್ವಾನಿಸಲಾಗಿದೆ. ಸಾಲಗಾರರ ಗೌರವಕ್ಕೆ ಚ್ಯುತಿ ಬರುವಂತೆ ಹಣಕಾಸು ಸಂಸ್ಥೆಗಳು ಏಜೆಂಟರು ನಡೆದುಕೊಳ್ಳಬಾರದು. ಸಾಲ ವಸೂಲಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಾಲಗಾರರ ಗೌರವಕ್ಕೆ ಚ್ಯತಿ ಬರದಂತೆ ನಡೆದುಕೊಳ್ಳಬಾರದು. ಸಾರ್ವಜನಿಕವಾಗಿ ಅವಹೇಳನ ಮಾಡಬಾರದು. ಸಾಲಗಾರರು ಮತ್ತು ಜಾಮೀನುದಾರರ ಕುಟುಂಬದ ಸದಸ್ಯರಿಗೂ ಅವಹೇಳನ ಮಾಡಬಾರದು. ಎಂದು ಕರಡು ನೀತಿಯಲ್ಲಿ ಹೇಳಲಾಗಿದೆ.
ಸಾಲಗಾರರಿಗೆ ಮೊಬೈಲ್, ಜಾಲತಾಣಗಳ ಮೂಲಕ ಅನುಚಿತ ಮೆಸೇಜ್ ಕಳುಹಿಸುವುದು, ಬೆದರಿಕೆ ಹಾಕುವುದು, ಅನಾಮಧೇಯ ನಂಬರ್ ಗಳಿಂದ ಕರೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಸಾಲ ಪಡೆದವರಿಗೆ ಮತ್ತು ಖಾತರಿದಾರರಿಗೆ ಪದೇ ಪದೇ ಕರೆ ಮಾಡುವಂತಿಲ್ಲ ಎಂದು ಹೇಳಲಾಗಿದೆ.
ಸಮಂಜಸವಲ್ಲದ ಮೆಸೇಜ್ ಕಳುಹಿಸಬಾರದು, ಬೆದರಿಕೆ ಒಡ್ಡಬಾರದು. ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಸಾಲಗಾರರು, ಅವರ ಕುಟುಂಬದವರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಬಾರದು. ಸಾಲ ವಸೂಲಿಗಾರರಿಗೆ ಸರಿಯಾದ ತರಬೇತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಪ್ರಸ್ತಾಪವನ್ನು ಆರ್‌ಬಿಐ ಮಂಡಳಿ ಎದುರು ಮಂಡಿಸಿ ಒಪ್ಪಿಗೆ ಪಡೆದ ನಂತರ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.