ಬೆಂಗಳೂರು: ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿ ದರ 65 ರೂ.ಗೆ ತಲುಪಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಮಳೆ ಕೊರತೆಯಿಂದಾಗಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಕೆಜಿ ಈರುಳ್ಳಿದರ 60- 65 ರೂಪಾಯಿಗೆ ಮಾರಾಟವಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಕೆಜಿಗೆ 80-100 ರೂಪಾಯಿ ತಲುಪಬಹುದು ಎಂದು ಹೇಳಲಾಗಿದೆ.
ಮಳೆ ಕೊರತೆಯ ಕಾರಣ ರಾಜ್ಯದಲ್ಲಿ ಈರುಳ್ಳಿ ಬೆಳೆ ಕಡಿಮೆಯಾಗಿದೆ. ಹೊರ ರಾಜ್ಯಗಳಿಂದಲೂ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರ, ಗುಜರಾತ್ ನಿಂದ ಈರುಳ್ಳಿ, ಪೂರೈಕೆಯಾಗದ ಹಿನ್ನೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿದೆ.
ಯಶವಂತಪುರ ಎಪಿಎಂಸಿಯಲ್ಲಿ ಗುರುವಾರ ಸಾಧಾರಣ ಗುಣಮಟ್ಟದ ಈರುಳ್ಳಿ 4,200 ರೂ.ವರೆಗೆ ಮಾರಾಟವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮೂಲಕ ಬೆಲೆ ನಿಯಂತ್ರಣ ಉದ್ದೇಶದಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿರುವ ಈರುಳ್ಳಿ ಕ್ವಿಂಟಲ್ ಗೆ 4000- 4,600 ರೂ. ದರ ಇದೆ.
ಅತ್ಯುತ್ತಮ ಮಹಾರಾಷ್ಟ್ರ ಈರುಳ್ಳಿ ದರ 5000-6000 ರೂಪಾಯಿಗೆ ಮಾರಾಟವಾಗಿದ್ದು, ಗುಣಮಟ್ಟದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಸಾಗಾಣೆ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 50 ರಿಂದ 65 ರೂ. ಇದೆ. ಮಾಲ್ ಗಳಲ್ಲಿ ಇದಕ್ಕಿಂತ 5-6 ರೂಪಾಯಿ ಹೆಚ್ಚು ದರ ಇದೆ.
15 ದಿನಗಳ ಹಿಂದೆಯಷ್ಟೇ 100 ರೂಪಾಯಿಗೆ 3-4 ಕೆಜಿ ಈರುಳ್ಳಿ ಸಿಗುತ್ತಿತ್ತು. ಈಗ ದರ ಬಾರಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.